ಮಾಳಿ ಮಾಲಗಾರ ನಿಗಮ ಸ್ಥಾಪನೆ: ವಿಜಯೋತ್ಸವ
ಪಟಾಕಿ ಸಿಡಿಸಿ, ಸಿಹಿ ಹಂಚಿ, ಸಿಎಮ್ ಬೊಮ್ಮಾಯಿ, ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿ ಸಂಭ್ರಮ
ವೆಂಕಟೇಶ ದೇಶಪಾಂಡೆ
ಅಥಣಿ 21: ಸಿಎಮ್ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಮಾಳಿ ಮಾಲಗಾರ ನಿಗಮ ಸ್ಥಾಪಿಸಿದ ಹಿನ್ನೆಲೆ ಅಥಣಿ ತಾಲೂಕಾ ಮಾಳಿ ಮಾಲಗಾರ ಸಮಾಜ ಧುರೀಣರು ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ನಿಗಮ ಸ್ಥಾಪನೆಗೆ ಕಾರಣರಾದ ಸಿಎಮ್ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಮಾಳಿ ಮಾಲಗಾರ ಸಮಾಜ ಬಂಧುಗಳು ತಮ್ಮ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಮೂಲಕ ಸಿಎಮ್ ಬೊಮ್ಮಾಯಿ ಇವರಿಗೆ ಮನವಿ ಮಾಡಲಾಗಿತ್ತು. ಅಂದಿನಿಂದಲೇ ಲಕ್ಷ್ಮಣ ಸವದಿ ಇವರು ಸಿಎಮ್ ಬೊಮ್ಮಾಯಿ ಇವರಿಗೆ ಮಾಳಿ ಮಾಲಗಾರ ನಿಗಮ ಪ್ರಾರಂಭಿಸಬೇಕು ಎಂದು ಆಗಾಗ ಒತ್ತಾಯಿಸಿದ ಪರಿಣಾಮ ರಾಜ್ಯ ಸರಕಾರ ಮಾಳಿ ಮಾಲಗಾರ ನಿಗಮ ಪ್ರಾರಂಭಗೊಂಡಿದ್ದು, ಮಾಳಿ ಮಾಲಗಾರ ಸಮಾಜದ ಬಂಧುಗಳು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಮಾಜದ ಹಿರಿಯ ಮುಖಂಡ ಶಿವಾನಂದ ದಿವಾನಮಳ, ರಾಜ್ಯ ಸರಕಾರ ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗಮ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪ್ರಮುಖವಾಗಿ ಈ ನಿಗಮ ಸ್ಥಾಪನೆಗೆ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ನಡೆಸಿದ ಪ್ರಯತ್ನದ ಫಲ ಎಂದ ಅವರು ಮುಖ್ಯಮಂತ್ರಿಗಳು ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ ನಿಗಮ ಸ್ಥಾಪನೆ ಮಾಡಿರುವುದು ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಗೀರೀಶ ಬುಟಾಳಿ ಮಾತನಾಡಿ, ಮಾಳಿ ಮಾಲಗಾರ ನಿಗಮ ಸ್ಥಾಪಿಸಲು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ, ಕುಡಚಿ ಶಾಸಕ ಪಿ.ರಾಜೀವ ಮತ್ತು ಅರಭಾವಿ ಶಾಸಕ ಭಾಲಚಂದ್ರ ಜಾರಕಿಹೊಳಿ ನಿರಂತರವಾಗಿ ಸಿಎಮ್ ಬೊಮ್ಮಾಯಿ ಇವರ ಮೇಲೆ ಒತ್ತಡ ತಂದ ಪರಿಣಾಮವೇ ನಮ್ಮ ಸಣ್ಣ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪನೆ ಆಗಿದ್ದು, ನಮ್ಮ ಇಡೀ ಮಾಳಿ ಮಾಲಗಾರ ಬಂಧುಗಳ ಪರವಾಗಿ ನಿಗಮ ಸ್ಥಾಪನೆಗೆ ಕಾರಣರಾದ ಧುರೀಣರನ್ನು ಅಭಿನಂದಿಸಿದರು.
ಪುರಸಭಾ ನಾಮ ನಿರ್ದೇಶನ ಸದಸ್ಯ ನರಸು ಬಡಂಕಬಿ ಮಾತನಾಡಿ, ಕಳೆದ ವರ್ಷ ಡಿಸೆಂಬರ 26 ರಂದು ಮುಗುಳಖೋಡ ಪಟ್ಟಣದಲ್ಲಿ ನಡೆದ ಮಾಳಿ ಮಾಲಗಾರ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಮುಂಬರುವ ಬಜೆಟ್ನಲ್ಲಿ ಮಾಳಿ ನಿಗಮ ಪ್ರಾರಂಭಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇವರಿಂದ ನಮ್ಮ ಸಮಾಜಕ್ಕೆ ಭರವಸೆ ಕೊಡಿಸಿದ್ದರು. ಅಂದಿನಿಂದಲೇ ಲಕ್ಷ್ಮಣ ಸವದಿ ಕಾರ್ಯ ಪ್ರವೃತ್ತರಾದರು ಈ ಹಿನ್ನೆಲೆಯಲ್ಲಿಯೇ ಈ ನಿಗಮ ಸ್ಥಾಪನೆಯಾಗಿದೆ ಎಂದ ಅವರು ಈ ನಿಗಮದ ಸ್ಥಾಪನೆಗೆ ಕೈ ಜೋಡಿಸಿದ ಕುಡಚಿ ಶಾಸಕ ಪಿ.ರಾಜೀವ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನೂ ನಮ್ಮ ಸಮಾಜ ಬಾಂಧವರಿಂದ ಅಭಿನಂದನೆಗಳು ಎಂದು ಹೇಳದರು.
ಧುರೀಣರಾದ ಮಹಾದೇವ ಹೊನ್ನೊಳಿ, ಮಲ್ಲೇಶ ಹುದ್ದಾರ, ಅರುಣ ಭಾಸಿಂಗಿ, ರಮೇಶ ಕಾಗಲೆ, ಬಸು ಸೋನಕರ, ಅಪ್ಪಾಸಾಹೇಬ ಕೋರಿಶೆಟ್ಟಿ, ಮಾರುತಿ ಐಗಳಿ, ಹಣಮಂತ ಭಾಸಿಂಗಿ, ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ಶಿವಾನಂದ ಹುನ್ನೂರ, ಮಹಾದೇವ ಹಡಪದ, ಅಪ್ಪು ಹಡಪದ, ಆನಂದ ಹಡಪದ, ಶಿವು ನಾಯಿಕ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಾಳಿ ಮಾಲಗಾರ ಬಂಧುಗಳು ವಿಜಯೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.