ಮತದಾರರ ಋಣ ತೀರಿಸುವ ಪ್ರಯತ್ನ: ಶಾಸಕ ಲಕ್ಷ್ಮಣ ಸವದಿ
ಅಥಣಿ 19: ವಿಧಾನ ಸಭೆಯ ಮೆಟ್ಟಿಲು ಏರಲು ನನಗೆ ಅವಕಾಶ ಕಲ್ಪಿಸಿದ್ದೇ ಸಂಬರಗಿ ಮತ್ತು ಇದರ ಸುತ್ತಮುತ್ತಲಿನ 30 ಗ್ರಾಮಗಳ ಮತದಾರರು. ಇಂತಹ ಮತದಾರರ ಉಪಕಾರ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದ ಅವರು ರೈತರಿಗೆ ಅನಕೂಲವಾಗಲೆಂದು ನಾನು ರಿನಿವಲ್ ಸಮಯದಲ್ಲಿ ಸಹಕಾರಿ ಸಂಘಕ್ಕೆ ಹಣಕಾಸಿನ ಸಹಾಯ ಮಾಡುವ ಮೂಲಕ ಮತದಾರರ ಋಣ ತೀರಿಸುವ ಪ್ರಯತ್ನ ಮಾಡುತ್ತಿರುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಂಬರಗಿಯ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರ, ಸಂಪತ್ತು ಇದ್ದಾಗ ಜನರಿಗೆ ಅನಕೂಲವಾಗುವ ಕೆಲಸ ಕಾರ್ಯಗಳನ್ನು ಮಾಡಿದಲ್ಲಿ ಮಾತ್ರ ನಾವು ಜನರ ಮನಸ್ಸಿನಲ್ಲಿ ಶಾಶ್ವತಬಾಗಿ ಉಳಿಯಲು ಸಾಧ್ಯ ಎಂದು ಹೇಳಿದ ಅವರು ಸಹಕಾರ ಕ್ಷೇತ್ರ ಇರದೇ ಹೋದಲ್ಲಿ ಗ್ರಾಮೀಣ ಜನರ ಬದುಕು ದುಸ್ತರವಾಗುತ್ತಿತ್ತು ಎಂದರು. ನಮ್ಮ ರಾಜ್ಯದಲ್ಲಿ 29 ಲಕ್ಷ ರೈತ ಕುಟುಂಬಗಳಿಗೆ 24 ಸಾವಿರ ಕೋಟಿ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ರಾಜ್ಯದಲ್ಲಿ ಎಲ್ಲಿ ಹೋದರು ಕೂಡ ನನ್ನನ್ನು ರೈತರಿಗೆ ಸಹಕಾರ ಸಂಘದ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ ವ್ಯಕ್ತಿ ಎಂದು ಗುರುತಿಸುತ್ತಾರೆ ಇದಕ್ಕಿಂತ ಹೆಚ್ಚು ನನಗೇನು ಬೇಕು ಎಂದು ಪ್ರಶ್ನಿಸಿದ ಅವರು ನನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಿ 1995 ರಲ್ಲಿ ಸ್ಪರ್ಧೆ ಮಾಡಿದಾಗ ನನ್ನನ್ನು ಈ ಭಾಗದ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗಳು ಬೆಂಬಲಿಸಿದ ಪರಿಣಾಮ ಅಂದು ನಿರ್ದೇಶಕನಾಗಿ ಆಯ್ಕೆ ಆಗಲು ಸಾಧ್ಯವಾಯಿತು ಎಂದರು.
ಕಕಮರಿ ಅಮ್ಮಾಜೇಶ್ವರಿ ಯೋಜನೆ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದ್ದು, ಅಕ್ಟೋಬರ 21 ರಂದು ಪೈಪ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡುತ್ತೇವೆ ಜೊತೆಗೆ ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು ರಾಜು ಕಾಗೆ ಮತ್ತು ನಾನು ಕೂಡಿಕೊಂಡು ಪ್ರಯತ್ನಿಸುತ್ತೇವೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ಅಥಣಿ ತಾಲೂಕಿನ ಉತ್ತರ ಭಾಗದ ಪ್ರದೇಶ ಒಳ್ಳೆಯ ಫಲವತ್ತಾದ ಭೂಮಿ ಹೊಂದಿದ್ದರೂ ಕೂಡ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ಇದ್ದುದರಿಂದ ಇಲ್ಲಿಯ ಸಾಮಾನ್ಯ ಜನ ತೀವೃ ಸಂಕಷ್ಟಕ್ಕೀಡಾಗಿದ್ದಾರೆ ಈ ಸಂಬಂಧ ನಾನು ಅನೇಕ ಬಾರಿ ಅಧಿವೇಶನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆದಿರುವೆ ಎಂದ ಅವರು ಇತ್ತೀಚಿಗೆ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯವಾಗಿ ಬೇಕಾದ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿರುವೆ ಎಂದರು.
ಕಾಗವಾಡ ಮತಕ್ಷೇತ್ರದ ಪ್ರತಿ ಗ್ರಾಮಕ್ಕೆ 40 ಲಕ್ಷ ಅನುದಾನ ಮಂಜೂರಾತಿ ಆಗುವ ಹಂತದಲ್ಲಿದ್ದು, ಈ ಅನುದಾನದಲ್ಲಿ 20 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಮತ್ತು ಇನ್ನುಳಿದ 20 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು. ಸಹಕಾರ ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಮಿಸಾಳ ಮಾತನಾಡಿ, ಶಾಸಕ ಲಕ್ಷ್ಮಣ ಸವದಿಯವರು ನಮ್ಮ ಸಹಕಾರಿ ಸಂಘಕ್ಕೆ ಬೆನ್ನೆಲುಬಾಗಿ ನಿಂತಿರುವುದರಿಂದಲೇ ಪ್ರಸಕ್ತ ಸಾಲಿನಲ್ಲಿ 4 ಕೋಟಿ 95 ಲಕ್ಷ ಪತ್ತು ಜಮಾ ಆಗಿದೆ. ನಮ್ಮ ಸಹಕಾರ ಸಂಘದ ಬೆಳವಣಿಗೆ ಈ ಭಾಗದ ರೈತರಿಗೆ ಸಾಕಷ್ಟು ಅನಕೂಲವಾಗಿದೆ ಎಂದರು. ಸಾನಿಧ್ಯವನ್ನು ನಾಗನೂರ ಪಿ.ಕೆ. ಗ್ರಾಮದ ಶಿವಸಿದ್ಧ ಬೀರಲಿಂಗೇಶ್ವರ ಮಹಾರಾಜರು, ಅಧ್ಯಕ್ಷತೆಯನ್ನು ವಿಲಾಸ ಟೋಣೆ ವಹಿಸಿದ್ದರು. ಸಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷೆ ಮೀನಾಕ್ಷಿ ದಳವಾಯಿ, ಧುರೀಣರಾದ ವಿನಾಯಕ ಬಾಗಡಿ, ಉತ್ತಮ ಪಾಟೀಲ, ಬಾಳು ಹಜಾರೆ, ಯಶವಂತ ಪಾಟೀಲ, ಘೂಳಪ್ಪ ಜತ್ತಿ, ಶಿವಾನಂದ ಗೊಲಭಾವಿ, ಸಿದರಾಯ ತೇಲಿ, ಅಬ್ದುಲ್ ಮುಲ್ಲಾ, ರಾಜು ಪಾಸಲೆ, ಬೀರಾ್ಪ ಉಗಾರೆ, ಬಿಡಿಸಿಸಿ ಬ್ಯಾಂಕಿನ ಶಂಕರ ನಂದೇಶ್ವರ, ಆಡಳಿತ ಮಂಡಳಿ ಸದಸ್ಯರಾದ ಧರ್ಮು ನರೋಟಿ, ತುಕಾರಾಮ ಶೇಳಕೆ, ಟೋಪಾಜಿ ಅವಳೇಕರ, ದೀಪಕ್ ಮಾನೆ, ಪರಸರಾಮ ನಾಟೇಕರ, ಅರುಣ ಟೋಣೆ, ಗೌರಕ್ಕಾ ಗಸ್ತಿ, ಸುಷ್ಮಾ ದೇವಮಾನೆ, ಸಾವಿತ್ರಿ ಅವಳೇಕರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಂಡಿಬಾ ಮಿಸಾಳ ಉಪಸ್ಥಿತರಿದ್ದರು.