ಯಲ್ಲಮ್ಮನಗುಡ್ಡದಲ್ಲಿ ದಸರಾ ಉತ್ಸವ ಸಂಪನ್ನ
ಉಗರಗೋಳ 25: ಸಮೀಪದ ಯಲ್ಲಮ್ಮನಗುಡ್ಡದಲ್ಲಿ 10 ದಿನಗಳ ಕಾಲ ಸಡಗರದಿಂದ ಜರುಗಿದ ದಸರಾ ಉತ್ಸವ ಮಂಗಳವಾರ ಸಂಪನ್ನಗೊಂಡಿತು. ಉಗರಗೋಳ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿರುವ ಬಣ್ಣೆಮ್ಮ ದೇವಸ್ಥಾನದ ಬಳಿ ಭಕ್ತರು ಬನ್ನಿ ಮುಡಿಯುವ ಮೂಲಕ ವೈಭವದ ದಸರೆಗೆ ತೆರೆ ಎಳೆಯಲಾಯಿತು.
ದಸರಾ ಅಂಗವಾಗಿ ಈ ಸಲ ಯಲ್ಲಮ್ಮನಗುಡ್ಡಕ್ಕೆ ಸಾವಿರಾರು ಭಕ್ತರ ದಂಡೇ ಹರಿದುಬಂದಿತ್ತು.
ಹಬ್ಬದ ದಿನವಾದ ಮಂಗಳವಾರವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿ ಹರಕೆ ತೀರಿಸಿದರು.
ಯಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ಆಯುಧ ಪೂಜೆ ಜರುಗಿತು. ಅರ್ಚಕರು ಆಯುಧಗಳನ್ನು ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ಪಲ್ಲಕ್ಕಿ ಉತ್ಸವವೂ ಸಂಭ್ರಮದಿಂದ ಜರುಗಿತು.
ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎನ್ನುವ ಜೈಕಾರ ಮುಗಿಲು ಮುಟ್ಟಿದ್ದವು. ಏಳುಕೊಳ್ಳದ ನಾಡಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ, ಅಧೀಕ್ಷಕ ಅರವಿಂದ ಮಾಳಗೆ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ.ಕಾಳಪ್ಪನವರ ಇತರರಿದ್ದರು.