ಕಿತ್ತೂರು ಸಂಸ್ಥಾನದ ಇತಿಹಾಸದ ಕುರಿತು ಮಹಿಳಾ ಕವಿಗೋಷ್ಠಿ ಉದ್ಘಾಟನೆ ಕಿತ್ತೂರು ಚೆನ್ನಮ್ಮನ ಇತಿಹಾಸ, ಮಹಿಳಾ ಶಕ್ತಿ ಕವಿತೆಗಳಲ್ಲಿ ಅನಾವರಣಗೊಳ್ಳಲಿ: ಡಾ. ಕೆ. ಶರೀಫಾ
ಬೆಳಗಾವಿ 24: ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ, ಧೈರ್ಯ ಮತ್ತು ಮಹಿಳಾ ಶಕ್ತಿಯ ಸಂದೇಶವನ್ನು ಸಾರುವ ಕಾವ್ಯಗಳು, ಲಾವಣಿಗಳು ಹಾಗೂ ಸಾಹಿತ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಕವಯಿತ್ರಿ ಡಾ. ಕೆ. ಶರೀಫಾ ಆಶಯ ವ್ಯಕ್ತಪಡಿಸಿದರು.ಕಿತ್ತೂರು ರಾಣಿ ಚೆನ್ನಮ್ಮ ಸಭಾಭವನದಲ್ಲಿ ಶನಿವಾರ (ಅ.24) ಜರುಗಿದ ಕಿತ್ತೂರು ಸಂಸ್ಥಾನದ ಕುರಿತು ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕದ ಇತಿಹಾಸದಲ್ಲಿ ಮಹಿಳೆಯರ ಸಾಹಸ, ಆಡಳಿತ ಸಾಮರ್ಥ್ಯ ಹಾಗೂ ಹೋರಾಟದ ಪರಂಪರೆ ಮಹತ್ವದ ಸ್ಥಾನ ಪಡೆದಿದೆ. .ಮಹಿಳೆಯರು ಅಧಿಕಾರದಲ್ಲಿದ್ದಾಗಲೂ ಅವರಿಗೆ ಎದುರಾದ ದ್ರೋಹ, ಸಂಘರ್ಷ ಮತ್ತು ಸವಾಲುಗಳು ಇತಿಹಾಸದಲ್ಲಿ ದಾಖಲಾಗಿವೆ. ಕಿತ್ತೂರು ಚೆನ್ನಮ್ಮನ ಹೋರಾಟದ ಇತಿಹಾಸವನ್ನು ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಜನರಿಗೆ ತಲುಪಿಸುವ ಅಗತ್ಯವಿದೆ. ಚೆನ್ನಮ್ಮನ ಬದುಕು, ಹೋರಾಟ ಮತ್ತು ಆದರ್ಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು ಡಾ. ಶರೀಫಾ ಹೇಳಿದರು.ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಅಥಣಿಯ ಪ್ರತಿಭಾ ಬೋರಗಾಂವಕರ, ವಿಚಾರಧಾರೆಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮಗಳು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು. ಮಹಿಳೆಯರ ನೋವು, ಅನುಭವ, ಅಂತರಂಗದ ಭಾವನೆಗಳು ಹಾಗೂ ಸಾಮಾಜಿಕ ಸವಾಲುಗಳಿಗೆ ಅಭಿವ್ಯಕ್ತಿ ನೀಡುವ ವೇದಿಕೆಗಳಾಗಿ ರೂಪುಗೊಳ್ಳಬೇಕು ಎಂದರು.ಕಿತ್ತೂರು ಸಂಸ್ಥಾನದ ರಕ್ಷಣೆಗಾಗಿ ಹೋರಾಡಿದ ರಾಣಿ ಚೆನ್ನಮ್ಮನ ಕೈಯಲ್ಲಿ ಅಂದು ಕತ್ತಿಯಿತ್ತು, ಇಂದು ಮಹಿಳೆಯರ ಕೈಯಲ್ಲಿ ಲೇಖನಿಯಿದೆ. ಕತ್ತಿಯು ಒಬ್ಬ ಶತ್ರುವನ್ನು ಎದುರಿಸಬಹುದು. ಆದರೆ ಲೇಖನಿಯು ಪ್ರಶ್ನೆಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.ಶಿಕ್ಷಣದ ಬೆಳಕನ್ನು ಸಮಾಜಕ್ಕೆ ಹರಡಿದ ಸಾವಿತ್ರಿಬಾಯಿ ಫುಲೆ ಅವರನ್ನು ಸ್ಮರಿಸಿದ ಅವರು, ಅಕ್ಷರದ ಮೂಲಕ ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದರು. 12ನೇ ಶತಮಾನದ ಅಕ್ಕಮಹಾದೇವಿ ತಮ್ಮ ಅಂತರಂಗದ ಭಾವನೆಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸಿದರೆ, ಚೆನ್ನಮ್ಮ ಶಸ್ತ್ರ ಹಿಡಿದು ಹೋರಾಡಿದರು. ಇಂದು ಕವಯಿತ್ರಿಯರು ಸಮಾನತೆ ಮತ್ತು ಸಮಾನತೆಯ ಆಶಯಗಳನ್ನು ತಮ್ಮ ಸಾಹಿತ್ಯದ ಮೂಲಕ ಪ್ರತಿಪಾದಿಸುತ್ತಿದ್ದಾರೆ ಎಂದು ತಿಳಿಸಿದರು.
ಚೆನ್ನಮ್ಮನ ಇತಿಹಾಸಕ್ಕೆ ಕವಯಿತ್ರಿಯರ ಕಾವ್ಯನಮನ:ಕವಿಗೋಷ್ಠಿಯಲ್ಲಿ ಭಾರತಿ ಮಠದ, ಹೇಮಾವತಿ ಸೊನ್ನಳ್ಳಿ, ಜ್ಯೋತಿ ಬದಾಮಿ, ಆಶಾ ಯಮಕನಮರಡಿ, ರೇಣುಕಾ ಕಠಾರಿ, ನಿರ್ಮಲಾ ಬಟ್ಟಲ, ದೀಪಿಕಾ ಚಾಟೆ, ಹಮಿದಾ ಬೇಗಂ ದೇಸಾಯಿ, ರಾಜನಂದಾ ಗಾರ್ಗಿ, ಮಲ್ಲವ್ವ ಪಾಟೀಲ, ಡಾ. ಪಾರ್ವತಿ ಪಾಟೀಲ, ಅಮ್ಮಾಜಿ, ರಾಣಿ ಭಗವಾನ್, ಮೀನಾಕ್ಷಿ ಸೂಡಿ, ಭುವನೇಶ್ವರಿ ಹಿರೇಮಠ, ಗೋಪಾಯಿ ಹೈಬತ್ತಿ, ಅನುಸೂಯ ಲಂಗೊಟಿ, ಶೀಲಾ ಜಗದೀಶ ಗಂಗಾಧರಮರ್ ಎಂ., ಕಾವ್ಯ ಬಿ.ಕೆ., ಮಹಾದೇವಿ ಪಾಟೀಲ, ಕಸ್ತೂರಿ ಚೌಗಲಾ, ಪ್ರಭಾವತಿ ಲದ್ದಿಮಠ ಹಾಗೂ ಪ್ರಿಯಾಂಕಾ ಚ. ಬಿಳ್ಳೂರ ಸೇರಿದಂತೆ ಹಲವು ಕವಯಿತ್ರಿಯರು ಭಾಗವಹಿಸಿದರು.ಕವಯಿತ್ರಿಯರು ತಮ್ಮ ಕವನ ಹಾಗೂ ವಿಚಾರಧಾರೆಗಳ ಮೂಲಕ ರಾಣಿ ಚೆನ್ನಮ್ಮನ ಜೀವನ ಚರಿತ್ರೆ, ಧೈರ್ಯ, ಹೋರಾಟ, ಮಹಿಳಾ ಸ್ವಾಭಿಮಾನ ಮತ್ತು ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗಿಂದ್ರ ಮಹಾಸ್ವಾಮಿಗಳು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಉಪನಿರ್ದೇಶಕರು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಬೆಳಗಾವಿ.