ಡೊಂಗರಗಾಂವ ರಾಜಕೀಯ ಸಾಧನೆಗಳು ಇಂದಿನ ಜನ ಪ್ರತಿನಿಧಿಗಳಿಗೆ ಮಾದರಿ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಮ್ ಪ್ರಶಂಸೆ: ; ಡೊಂಗರಗಾಂವ ರಾಜಕೀಯ ಸಾಧನೆಗಳ ಗ್ರಂಥ ಬಿಡುಗಡೆ
ಲೋಕದರ್ಶನ ವರದಿ
ಅಥಣಿ 25: ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ರಾಜಕೀಯ ಸಾಧನೆಗಳು ಇಂದಿನ ಜನ ಪ್ರತಿನಿಧಿಗಳಿಗೆ ಮಾದರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಮ್ ಹೇಳಿದರು. ಅವರು ಅಥಣಿಯ ಎ.ಕೆ.ಹೈಸ್ಕೂಲ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಥಣಿ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಶಹಜಹಾನ ಡೊಂಗರಗಾಂವ ರಾಜಕೀಯ ಸಾಧನೆಗಳ ಕುರಿತು ಸಂಶೋಧನಾ ವಿದ್ಯಾರ್ಥಿನಿ ರಚಿಸಿದ ಗ್ರಂಥ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಾಮಾನ್ಯ ಮುಸ್ಲೀಂ ಕೃಷಿ ಕುಟುಂಬದಿಂದ ಬಂದಿರುವ ಡೊಂಗರಗಾಂವ ಸತತ ಪ್ರಯತ್ನ ಹಾಗೂ ಸಾಮಾನ್ಯ ಗ್ರಾಮೀಣ ಹಾಗೂ ಎಲ್ಲ ಧರ್ಮ, ಜಾತಿಗಳ ಜನರಿಗೆ ಸಹಾಯ, ಸಹಕಾರ ಮಾಡುತ್ತ ಸಂಪರ್ಕ ಇಟ್ಟುಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು. ಗೆದ್ದ ಕೆಲವೇ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಗೆದ್ದ ಶಾಸಕರಿಗೂ ಸಾಧ್ಯವಾಗದ ಪ್ರಮುಖ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ ಹೀಗಾಗಿಯೇ ಇವರು ಕ್ಷೇತ್ರದಲ್ಲಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿಯೇ ಅಲ್ಪ ಸಮಯದಲ್ಲಿ ಜನಪ್ರಿಯರಾದರು ಎಂದರು.
ಇಂತಹ ಜನಪ್ರಿಯ ಹಾಗೂ ಜನೋಪಯೋಗಿ ಶಾಸಕರಾಗಿದ್ದ ಡೊಂಗರಗಾಂವ ಇವರನ್ನು ಧರ್ಮದ ಗೋಡೆ ನಿರ್ಮಿಸಿ ಪರಾಭವಗೊಳಿಸಿದರು ಎಂದ ಅವರು ಅಧರ್ಮ, ಅನೈತಿಕ ರಾಜಕೀಯ ವ್ಯವಸ್ಥೆಯಿಂದ ದೇಶದಲ್ಲಿ ಅರಾಜಕತೆ ನಿರ್ಮಾಣವಾಗಿದ್ದನ್ನು ಕಂಡು ಈ ವ್ಯವಸ್ಥೆ ಬಿಟ್ಟು ಹೊರಗೆ ಬರಬೇಕು ಎಂದು ನಾನೂ ಸಹ ನಿರ್ಧರಿಸಿದ್ದೆ ಆದರೆ ವ್ಯವಸ್ಥೆಯಲ್ಲಿದ್ದುಕೊಂಡೇ ವ್ಯವಸ್ಥೆ ಬದಲಿಸಬೇಕೆಂದು ರಾಜಕೀಯದಲ್ಲಿ ಮುಂದುವರೆದಿರುವೆ ಎಂದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಚಿತ ಶಿಕ್ಷಣ ನೀಡುವ ಇಂಟರ್ ನ್ಯಾಶನಲ್ ಶಾಲೆ ಹಾಗೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಇದರ ಜೊತೆಗೆ ಇನ್ನೂ ಅನೇಕ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಅನಿಷ್ಠಾನಗೊಳಿಸಲಾಗುವುದು ಎಂದ ಅವರು ಕನ್ನಡಿಗರ ನೇತೃತ್ವ ಇರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹಾಗೂ ಗ್ರಂಥ ರಚನೆ ಮಾಡಿರುವ ಕು.ಮೊಹಮದೀಯ ಆರೀಫ್ ಮೋಮಿನ್ ಇವರನ್ನು ಸತ್ಕರಿಸಲಾಯಿತು. ಸಾನಿಧ್ಯ ವಹಿಸಿದ್ದ ಕಕಮರಿ ರಾಯಲಿಂಗೇಶ್ವರ ಮಠದ ಶ್ರೀ ಗುರುಲಿಂಗಜಂಗಮ ಮಹಾರಾಜರು, ಕೌಲಗುಡ್ಡ ಶ್ರೀ ಅಮರೇಶ್ವರ ಮಹಾರಾಜರು, ವಿಮೋಚನಾ ಸಂಘದ ಬಿ.ಎಲ್.ಪಾಟೀಲ, ಹಿರಿಯ ನ್ಯಾಯವಾದಿ ಆರ್.ಎನ್.ಸಿದ್ಧಾಂತಿ, ಬಿ.ಆರ್.ಗಂಗಪ್ಪನವರ ಮಾತನಾಡಿದರು.
ವೇದಿಕೆಯಲ್ಲಿ ಧುರೀಣರಾದ ಪ್ರತಾಪರಾವ ಪಾಟೀಲ, ದಿಗ್ವಿಜಯ ಪವಾರದೇಸಾಯಿ, ಗೀರೀಶ ಬುಟಾಳಿ, ಮಲ್ಲಿಕಾರ್ಜುನ ಕನಶೆಟ್ಟಿ, ಅರ್ಷದ ಗದ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಮುರುಘೇಶ ಬಾನಿ ವಂದಿಸಿದರು.