ಸ್ಲಂ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ 798 ಮನೆಗಳ ನಿರ್ಮಾಣ
ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿಕೆ: ಕೊಳಗೇರಿ ನಿವಾಸಿಗಳ ಮನೆಗಳಿಗೆ ಶಂಕುಸ್ಥಾಪನೆ
ಅಥಣಿ 28: ಕೊಳಗೇರಿ ನಿಗಮದಿಂದ ಅಥಣಿ ಪಟ್ಟಣದ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ 51 ಕೋಟಿ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ 798 ಮನೆಗಳನ್ನು ನಿರ್ಮಿಸಲಾಗುವುದು ಎಂದು ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಅಥಣಿಯ ವಿವಿಧ ಸ್ಲಂ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಕೊಳಗೇರಿ ನಿವಾಸಿಗಳ ಮನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಸರ್ವರಿಗೂ ಸೂರು ಒದಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಈ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಹೆಚ್ಚು ಪರಿಣಾಮಕಾರಿಯಾಗಿ ಕೊಳಗೇರಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ್ದಾರೆ. ಸಾಮಾನ್ಯವಾಗಿ ಕೊಳಗೇರಿಯಲ್ಲಿ ಅಕ್ರಮ ಜಾಗದಲ್ಲಿಯೇ ತಾತ್ಕಾಲಿಕ ಕಚ್ಚಾ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ ಇಂತಹ ನಿವಾಸಿಗಳಿಗಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕೊಳಗೇರಿ ನಿವಾಸಿಗಳು ಅಕ್ರಮವಾಗಿ ವಾಸ ಮಾಡುತ್ತಿರುವ ಜಾಗವನ್ನೂ ಸಹ ನಿವಾಸಿಗಳ ಹೆಸರಿಗೆ ನೋಂದಣಿ ಅಧಿಕಾರಿಗಳ ಕಛೇರಿಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ನೋಂದಣಿ ಕೂಡ ಮಾಡಿಕೊಡಲಾಗುತ್ತದೆ ಎಂದರು.
ಈ ಯೋಜನೆ 800 ರಿಂದ 1200 ಚದರ ಅಡಿ ಜಾಗದಲ್ಲಿ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ 7 ಲಕ್ಷ 20 ಸಾವಿರ ವೆಚ್ಚವಾಗುತ್ತದೆ ಈ ಪೈಕಿ ಫಲಾನುಭವಿಗಳು 72 ಸಾವಿರ ರೂ.ಗಳನ್ನು ಪಾವತಿಸಬೇಕು ಮತ್ತು ಇನ್ನುಳಿದ ನಿವಾಸಿಗಳು 1 ಲಕ್ಷ 8 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದ ಅವರು ಇದರ ಜೊತೆಗೆ ಬಡ್ಡಿ ರಹಿತ 2 ಲಕ್ಷ ರೂ.ಗಳನ್ನು 20 ವರ್ಷಗಳವರೆಗೆ ಸಾಲ ಕೂಡ ಕೊಡಲಾಗುವುದು ಎಂದು ಹೇಳಿದರು.
ಕೊಳಗೇರಿ ನಿಗಮದ ಅಧಿಕಾರಿಗಳು ಸ್ಲಂ ಬೋರ್ಡ ಘೋಷಿಸಿದ ಕೊಳಗೇರಿ ಪ್ರದೇಶದಲ್ಲಿ ಸರ್ವೇ ಕಾರ್ಯ ಪ್ರಾರಂಭಿಸುತ್ತಾರೆ. 800 ರಿಂದ 1200 ಚದುರ ಅಡಿ ಜಾಗವನ್ನು ಫಲಾನುಭವಿಗಳ ಹೆಸರಿಗೆ ನೊಂದ ಮಾಡಿಸಿ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು. ಈಗಾಗಲೇ ಈ ಯೋಜನೆಯಡಿ ಹತ್ತಾರು ಕೊಳಗೇರಿ ನಿವಾಸಿಗಳು ಮುಂದೆ ಬಂದಿದ್ದಾರೆ ಮುಂದಿನ ದಿನಗಳಲ್ಲಿ ಎಲ್ಲ 798 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನಿರ್ಮಿಸಿಕೊಟ್ಟ ನಂತರ ಇನ್ನೂ 500ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದರು.
ಧುರೀಣರಾದ ಉಮೇಶ ಬಂಟೋಡಕರ, ಅನೀಲ ಸೌದಾಗರ, ರಮೇಶಗೌಡ ಪಾಟೀಲ, ಶಶಿಕಾಂತ ಸಾಳವೆ, ಸಿದ್ದು ಪಾಟೀಲ, ಮಹಾಂತೇಶ ಬಾಡಗಿ, ಪುರಸಭಾ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಪುರಸಭಾ ಸದಸ್ಯರಾದ ಕಲ್ಲೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ತಿಪ್ಪಣ್ಣ ಭಜಂತ್ರಿ, ವಿನಯ ಪಾಟೀಲ, ರಮೇಶ ಪವಾರ ಸೇರಿದಂತೆ ಕೊಳಗೇರಿ ನಿಗಮದ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.