ಧಾರವಾಡ - ಹುಬ್ಬಳ್ಳಿ

ಧಾರವಾಡ ಕೆಎಂಎಫ್ ಲಾಭದತ್ತ ಒಯ್ಯುವೆ: ಅಧ್ಯಕ್ಷ ಶಂಕರ

ಧಾರವಾಡ ಕೆಎಂಎಫ್ ಲಾಭದತ್ತ ಒಯ್ಯುವೆ: ಅಧ್ಯಕ್ಷ ಶಂಕರ

ಹಾಲು ಉತ್ಪಾದಕರ ಹಿತಾಸಕ್ತಿಗೆ ಬದ್ಧ

ಧಾರವಾಡ16:ಉತ್ಪಾದಕರ, ಗ್ರಾಹಕರ ಹಾಗೂ ಒಕ್ಕೂಟದ ನೌಕರರ ಹಿತಾಸಕ್ತಿ ಕಾಪಾಡುವ ಮೂಲಕ ಒಕ್ಕೂಟವನ್ನು ಲಾಭದತ್ತ ಒಯ್ಯುತ್ತೇನೆಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ತಮ್ಮ ಅಭಿಪ್ರಾಯದಲ್ಲಿ ತಿಳಿಸಿದರು.  

ಧಾರವಾಡದ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ಧಾರವಾಡ ಪ್ರೈಮ್ ವತಿಯಿಂದ ಡಾ. ರಾಜನ್ ದೇಶಪಾಂಡೆ ಆಸ್ಪತ್ರೆಯ ತೇಜ ಸಭಾಭವನದಲ್ಲಿ ಆಯೋಜಿಸಿದ್ದ ಶಂಕರ ಮುಗದ ಅವರಿಗೆ ಅಭಿನಂದನೆ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾನು 2ನೇ ಬಾರಿ ಅಧ್ಯಕ್ಷನಿದ್ದಾಗಲೇ ಒಕ್ಕೂಟದಿಂದ ಹಾವೇರಿ ಜಿಲ್ಲೆಯು ಬೇರ​‍್ಪಟಟಿತು. ಹಾಲಿನ ಕೊರತೆಯಾಗಿ ಗ್ರಾಹಕರ ಬೇಡಿಕೆ ಈಡೇರಿಸಲು ಆರೇಳು ರುಪಾಯಿ ಹೆಚ್ಚಿನ ಹಣ ನೀಡಿ ಬೇರೆಡೆಯಿಂದ ಹಾಲು ಸಂಗ್ರಹಿಸುವ ಸ್ಥಿತಿ ಉಂಟಾಯಿತು. ಇದರಿಂದ ಒಕ್ಕೂಟ ತುಂಬ ಆರ್ಥಿಕವಾಗಿ ನಷ್ಟದಲ್ಲಿತ್ತು. ದಿನಕ್ಕೆ ಈ 5 ಲಕ್ಷ ಹಾಗೂ ತಿಂಗಳಿಗೆ ಈ 1.5 ಕೋಟಿ ನಷ್ಟವಾಗುತ್ತಿತ್ತು. ಕಠಿಣ ನಿಲುವುಗಳ ಮೂಲಕ ಒಕ್ಕೂಟವನ್ನು ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಲಾಗಿದೆ.  

ಈ 33 ಕೋಟಿ ಸಾಲದಿಂದ ಇದೀಗ ಬರೀ ಈ 7 ಕೋಟಿಗೆ ಬಂದಿದ್ದು, ಒಕ್ಕೂಟವು ಲಾಭದತ್ತ ಸಾಗುತ್ತಿದೆ. ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿದವರಿಗೆ ಸಹಾಯ ಸಹಕಾರ ನೀಡುತ್ತಾ ಅವರ ಏಳಿಗೆಯನ್ನು ಮಾಡಲು ಯೋಜನೆ ರೂಪಿಸಿ ಕಾರ್ಯ ಮಾಡುವೆ ಎಂದರು.ನಾನು ಈ ಸ್ಥಾನಕ್ಕೆ ಬರಲು ಮಾಜಿ ಸಚಿವ ಎ.ಬಿ. ದೇಸಾಯಿ ಹಾಗೂ ಅವರ ಪುತ್ರ, ಮಾಜಿ ಶಾಸಕ ಅಮೃತ ದೇಸಾಯಿ ಕಾರಣ. ಒಕ್ಕೂಟಕ್ಕೆ ಹಾಲು ತರುವ ವಾಹನ ಚಾಲಕನಾಗಿ, ಐದು ಬಾರಿ ನಿರ್ದೇಶಕನಾಗಿ, ಈಗ 3ನೇ ಬಾರಿ ಅಧ್ಯಕ್ಷನಾಗಿದ್ದು ಹೆಮ್ಮೆ ಎನಿಸುತ್ತಿದೆ. ಗ್ರಾಹಕರು, ಹಾಲು ಉತ್ಪಾದಕರು ನನ್ನ ಮೇಲೆ ಇಟ್ಟಿರುವ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇನೆಂದರು.  

ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಮೂವತ್ತು ವರ್ಷಗಳ ಕಾಲ ಒಕ್ಕೂಟದೊಂದಿಗೆ ಒಡನಾಟ ಹೊಂದಿದ ಮುಗದ ಅವರು ಸಂಸ್ಥೆಯನ್ನು ಲಾಭದತ್ತ ಒಯ್ಯುತ್ತಾರೆ ಎಂಬ ನಂಬಿಕೆ ಇದೆ. ಬರೀ ಪುರುಷ ಹಾಲು ಉತ್ಪಾದಕ ಸಂಘಗಳು ಮಾತ್ರವಲ್ಲದೇ ಮಹಿಳಾ ಹಾಲು ಉತ್ಪಾದಕ ಸಂಘಗಳನ್ನು ತೆರೆದು ಅವರೂ ಸ್ವಾವಂಬಿಯಾಗಲು ಸಹಕಾರಿಯಾಗಿದ್ದಾರೆ. ಅವರೊಬ್ಬ ಸಹಕಾರಿ ಪಟು ಎಂದರು.ಅಧ್ಯಕ್ಷತೆ ವಹಿಸಿದ್ದ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ, ಎಲ್ಲರೂ ನಾಯಕರಾಗುವುದಿಲ್ಲ. ಅರ್ಹತೆ ಇದ್ದವರು ಮಾತ್ರ ನಾಯಕರಾಗುತ್ತಾರೆ. 

 ಅದರಲ್ಲೂ ಶಂಕರ ಮುಗದ ಅಂತಹವರು ಯಶಸ್ವಿನಾಯಕರು ಎಂದು ಶ್ಲಾಘಿಸಿದರು. ಉತ್ತರ ಕರ್ನಾಟಕದಲ್ಲಿ ನಂದಿನಿಯ ಇನ್ನಷ್ಟು ಅಂಗಡಿಗಳು ತೆರೆಯುವ ಮೂಲಕ ಅಮೂಲ್‌ಗೆ ಪೈಪೋಟಿ ನೀಡಬೇಕೆಂದು ಸಲಹೆ ನೀಡಿದರು.ವಕೀಲ ಅರುಣ ಜೋಶಿ, ರೋಟರಿ ಕ್ಲಬ್ ಅಸಿಸ್ಟೆಂಟ್ ಗೌವರ್ನರ್ ಡಾ. ಪಲ್ಲವಿ ದೇಶಪಾಂಡೆ, ರೋಟರಿ ಕ್ಲಬ್ ಪ್ರೈಮ್ ನ ಅಧ್ಯಕ್ಷೆ ಡಾ. ಶಿಲ್ಪಾ ಅಡೂರ, ಧಾರವಾಡ ಸೆಂಟ್ರಲ್ ಅಧ್ಯಕ್ಷೆ ಕರಣ ದೊಡ್ಡವಾಡ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌. ಫರಾಸ್, ಎಂಜಿನಿಯರ್ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿದರು.  

 ಅಭಿನಂದನೆ ನಂತರ ಗಾಯಕರಾದ ಪ್ರೇಮಾನಂದ ಶಿಂಧೆ ಮತ್ತು ಶಿವಾನಂದ ಹೂಗಾರ ಸಂಗೀತ ಕಚೇರಿ ನಡೆಸಿದರು.  ಸಂಘಟಕ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಸಹನಾ ಶಿಂಧೆ ಪ್ರಾರ್ಥಿಸಿದರು, ರೋಟರಿ ಕ್ಲಬ್ ಕಾರ್ಯದರ್ಶಿ ವಾಮನ ಮಂತ್ರಿ ವಂದಿಸಿದರು, ಕೋಶಾಧ್ಯಕ್ಷ ಪವನ ಅವರು ಗಣ್ಯರನ್ನು ಪರಿಚಯಿಸಿದರು.ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೆ.ಎಚ್ ನಾಯಕ,ಡಾ ಕವನ ದೇಶಪಾಂಡೆ,  ನಿವೃತ್ತ ಶಿಕ್ಷಕ ಬಿ ಜಿ ಬಾರ್ಕಿ, ಕಲಾವಿದರಾದ ಎಸ್ ಎಮ್ ದಾನಪ್ಪಗೌಡರ, ಗಾಯಕಿ ಪ್ರಮೀಳಾ ಜಕ್ಕಣ್ಣವರ, ಸಂಘಟಕ ಪ್ರಕಾಶ ಬಾಳಿಕಾಯಿ, ಇಂಜಿನಿಯರ ಅರುಣ ಶೀಲವಂತ,  ಶೀತಲಗೊಲ್ಡನ ಪ್ರವೀಣ ಜೈನ್, ಮೋತಿಲಾಲ್ ಜೈನ್, ವಿಜಯ ಹಿರೇಮಠ, ರೋಟರಿಯನ್ ಗೀರೀಶ ಬೇಟಗೇರಿ, ಸಮಾಜಸೇವಕ ವಿರೇಶ ಕೆಲಗೇರಿ, ಅರವಿಂದ ಕುಲಕರ್ಣಿ, ಎ.ಎನ್ ದೇಸಾಯಿ, ರಮೇಶ ಬಣಕಾರ ಹಾಗೂ ರೋಟರಿ ಪದಾಧಿಕಾರಿಗಳು ಮತ್ತು ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ