ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ತೃಪ್ತಿ ತಿಳಿಗೂಳ
ಇಂಡಿ 22: ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಅಂಗನವಾಡಿ ಮೇಲ್ವಿಚಾರಕಿ ತೃಪ್ತಿ ತಿಳಿಗೂಳ ಅವರು ಹೇಳಿದರು.ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪೂರ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ನಿಷೇಧ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ತಡೆಗಟ್ಟಿ ಮಕ್ಕಳ ಬಾಳನ್ನು ಬೆಳಗಬೇಕು ಎಂದು ಹೇಳಿದರು.ಜಿಲ್ಲಾ ಮಕ್ಕಳ ರಕ್ಷಣಾ ಸಲಹಾ ಅಧಿಕಾರಿ ಸಂತೋಷ ಚಾಂದಕವಠೆ ಮಾತನಾಡಿ ಸರ್ಕಾರ ಬಾಲ್ಯ ವಿವಾಹ ವಿರುದ್ಧ ಕಾನೂನು ಜಾರಿಗೆ ತಂದಿದ್ದು, ಕಾಯಿದೆ 2006 ಹಾಗೂ ಪೋಕ್ಸೋ 2012 ಕಾಯ್ದೆ ಬಗ್ಗೆ ಇತರರಿಗೆ ಇದರ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಬಡತನ, ಮೂಢನಂಬಿಕೆಯಿಂದ ಬಾಲ್ಯವಿವಾಹ ನಡೆಯುತ್ತಿದೆ. 30 ವರ್ಷಗಳ ಹಿಂದೆ ಬಾಲ್ಯ ವಿವಾಹ ಸಮಾಜದಲ್ಲಿ ಹೆಚ್ಚಾಗಿತ್ತು. ಇದಕ್ಕೆ ವರದಕ್ಷಿಣೆಯೂ ಕಾರಣವಾಗಿದೆ. ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ವಿವಾಹನ್ನು ನಿಶ್ಚಹಿಸಿಕೊಂಡು ಇಂತಹ ವಿವಾಹ ನಡೆಸಲಾಗುತ್ತಿದೆ. ನಾನಾ ಇಲಾಖೆಯ ಅಧಿಕಾರಿಗಳು ಸಮಾಜದ ಹೊಣೆಗಾರಿಕೆ ಮತ್ತು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.ಮಂದಾಕಿನಿ ನಾಗಠಾಣ ಮಾತನಾಡಿ 21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವೆ ಇಲ್ಲವೆ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇದನ್ನು ಆದಷ್ಟು ತಡೆಗಟ್ಟಿ ಬಾಲ್ಯವಿವಾಹ ಸಂಪೂರ್ಣವಾಗಿ ತೊಲಗಿಸಬೇಕು ಎಂದು ತಿಳಿಸಿದರು. ಪೋಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಇಲಾಖೆ ಅಷ್ಟೇ ಅಲ್ಲದೆ ಎಲ್ಲರೂ ಮುಂದಾಗಬೇಕು. ಶಿಕ್ಷಣದ ಕೊರತೆಯಿಂದಾಗಿ ಇಂತಹ ಪಿಡುಗುಗಳು ಸಮಾಜದಲ್ಲಿ ಇಂದಿಗೂ ಕಾಡುತ್ತಿವೆ. ಹೆಚ್ಚಿನ ಶಿಕ್ಷಣ ಪಡೆಯುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಅರಿಯಬೇಕು. ಬಾಲ್ಯ ವಿವಾಹಕ್ಕೆ ಮುಂದಾಗುವವರಿಗೆ ಶಿಕ್ಷೆ ನೀಡುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.ಶಾಲೆಯ ಮುಖ್ಯಗುರುಗಳು, ಗುರುಗಳು, ಗುರು ಮಾತೆಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.