ಬೆಳಗಾವಿ

ಅರಳಿ ಮರದ ಎದುರಿನ ರಸ್ತೆ ತೀವ್ರ ಹದಗೆಟ್ಟು ಸಾರ್ವಜನಿಕರ ಪರದಾಟ: ತಕ್ಷಣ ರಸ್ತೆ ದುರಸ್ತಿಗೆ ಸ್ಥಳೀಯರ ಆಗ್ರಹ

ಅರಳಿ ಮರದ ಎದುರಿನ ರಸ್ತೆ ತೀವ್ರ ಹದಗೆಟ್ಟು ಸಾರ್ವಜನಿಕರ ಪರದಾಟ: ತಕ್ಷಣ ರಸ್ತೆ ದುರಸ್ತಿಗೆ ಸ್ಥಳೀಯರ ಆಗ್ರಹ
Road in front of the peepal tree in a severely dilapidated state, causing hardship to the public; lo

ಸವದತ್ತಿ 27 :  ರಾಮಾಪೂರ ಸೈಟ್ ಭಾಗದ ಅರಳಿ ಮರದ ಮುಂಭಾಗದ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯು ಕೆಂಚಲಾರಕೊಪ್ಪ ಹನಮಂತ ದೇವಸ್ಥಾನ ಹಾಗೂ ಪ್ರಮುಖ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಹಾದಿಯಾಗಿದೆ. ಪ್ರತಿದಿನ ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ವ್ಯಾಪಾರಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ರಸ್ತೆಯುದ್ದಕ್ಕೂ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುವುದು ನಿತ್ಯದ ಘಟನೆಯಾಗಿದೆ.

ವಿಶೇಷವಾಗಿ ವಯೋವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರು ಬಸ್ ನಿಲ್ದಾಣ ತಲುಪಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯ ದುಸ್ಥಿತಿಯಿಂದಾಗಿ ಈ ಪ್ರದೇಶದ ವ್ಯಾಪಾರ-ವಹಿವಾಟಿನ ಮೇಲೆಯೂ ತೀವ್ರ ಹೊಡೆತ ಬಿದ್ದಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಯಾವುದೇ ದೊಡ್ಡ ಮಟ್ಟದ ಅಪಘಾತ ಸಂಭವಿಸಿ ಜೀವಹಾನಿಯಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಗುಣಮಟ್ಟದ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ