ಅಥಣಿ

ಶ್ರೀಮಂತ ಪಾಟೀಲ ಪ್ರಯತ್ನದಿಂದ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 3 ಟಿ.ಎಮ್‌.ಸಿ ನೀರು

ಶ್ರೀಮಂತ ಪಾಟೀಲ ಪ್ರಯತ್ನದಿಂದ   ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 3 ಟಿ.ಎಮ್‌.ಸಿ ನೀರು

ಅಥಣಿ 02: ಬೇಸಿಗೆ ಅವಧಿಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇವರನ್ನು ಭೇಟಿ ಮಾಡಿದ ಪರಿಣಾಮ ಮಹಾರಾಷ್ಟ್ರ ಸರಕಾರ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ 3 ಟಿ.ಎಮ್‌.ಸಿ ನೀರು ಹರಿಸಿದೆ.   

 ಶ್ರೀಮಂತ ಪಾಟೀಲರು ಮನವಿ ಮಾಡಿದ ಕೆಲವೇ ಕೆಲವು ದಿನಗಳಲ್ಲಿಯೇ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸಮಿಶ್ರ ಸರಕಾರ ಅಸ್ತಿತ್ವದಲ್ಲಿರುವುದು ಹಾಗೂ ಈ ಸರಕಾರದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಇವರೊಂದಿಗೆ ಶ್ರೀಮಂತ ಪಾಟೀಲರ ಉತ್ತಮ ಸೌಹಾರ್ದ ಸಂಬಂಧ ಹೊಂದಿರುವುದೇ ಮುಖ್ಯ ಕಾರಣವಾಗಿದೆ.  

ನೀರು ಬಿಡುವ ವಿಷಯ ತಿಳಿದ ಶ್ರೀಮಂತ ಪಾಟೀಲ ರಾಜಾಪುರದಿಂದ ಕರ್ನಾಟಕ ವ್ಯಾಪ್ತಿಯ ಕೃಷ್ಣಾ ನದಿಗೆ ನೀರು ಬರುವ ಸ್ಥಳಕ್ಕೆ ಭೇಟಿ ನೀಡಿ ನೆರೆದಿದ್ದ ರೈತರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಸಂತೋಷ ಹಂಚಿಕೊಂಡರು.  

 ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷ್ಣಾ ನದಿಯಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಉಂಟಾಗುತ್ತಿರುವುದನ್ನು ಗಮನಿಸಿದ ನಾನು ಮಹಾರಾಷ್ಟ್ರ ಸರಕಾರದೊಂದಿಗೆ ಪತ್ರ ವ್ಯವಹಾರ ಮಾಡಿ ನೀರು ಬಿಡಲು ಆಗ್ರಹಿಸಿದ್ದೆ ಜೊತೆಗೆ ಚುನಾವಣೆಯ ಕೆಲಸ, ಕಾರ್ಯಗಳನ್ನು ಬದಿಗೊತ್ತಿ ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇವರನ್ನು ವಿಜಯಪುರದ ಇಂಡಿಯಲ್ಲಿ ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಆಗ್ರಹಿಸಿದ ಪರಿಣಾಮ ಅವರು ತಕ್ಷಣ ನೀರು ಬಿಡಲು ಕ್ರಮ ಕೈಗೊಂಡಿದ್ದು, ಅವರಿಗೆ ಕರ್ನಾಟಕದ ಗಡಿ ಭಾಗದ ಕಾಗವಾಡ, ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳ ಜನರ ಹಾಗೂ ರೈತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು. 


ಸುದ್ದಿ ಓದಿ