ಡಬ್ಬಾ ಅಂಗಡಿ ತೆರವುಗೊಳಿಸಲು ಆಗ್ರಹಿಸಿ ವ್ಯಾಪಾರಸ್ಥರ ಪ್ರತಿಭಟನೆ
ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಒಳಗಡೆ ಟೆಂಡರಗೆ ಒಳಪಡದೆ ರಾತ್ರೋರಾತ್ರಿ ಡಬ್ಬಾ ಅಂಗಡಿ
ಬೈಲಹೊಂಗಲ 10: ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಆವರಣದ ಪ್ಲಾಟ್ ಫಾರ್ಮ್ ಒಳಗಡೆ ರಾತ್ರೋರಾತ್ರಿ ಡಬ್ಬಾ ಅಂಗಡಿಯನ್ನು ಹಾಕಿರುವುದನ್ನು ಶೀಘ್ರ ತೆರುವುಗೊಳಿಸಬೇಕು ಎಂದು ಒತ್ತಾಯಿಸಿ ಬಸ್ ನಿಲ್ದಾಣದ ಮಳಿಗೆಗಳ ವ್ಯಾಪಾರಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಬಸ್ ನಿಲ್ದಾಣದ ನೂತನ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಪ್ಲಾಟ್ ಫಾರ್ಮ್ ನಿರ್ಮಿಸಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನ, ಬಸ್ಸಿನ ಓಡಾಟಗಳ ಮಾರ್ಗ ಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಹೊಸದಾದ ಬಸ್ ನಿಲ್ದಾಣದ ಕಟ್ಟಡದಲ್ಲಿ ಸುಮಾರು 32 ಮಳಿಗೆಗಳನ್ನು ಕಟ್ಟಿ ಬಾಡಿಗೆ ನೀಡಲಾಗಿದೆ. ಬಾಡಿಗೆ ಪಡೆದಿರುವ ವ್ಯಾಪಾರಸ್ಥರು ಒಂದೊಂದಾಗಿ ಮಳಿಗೆ ತೆಗೆದು ವ್ಯಾಪಾರ ನಡೆಸುತ್ತಿದ್ದಾರೆ. ಈ ಎಲ್ಲ ವ್ಯಾಪಾರಸ್ಥರಿಗೆ ಅಡಚಣೆ ಆಗುವ ರೀತಿಯಲ್ಲಿ ಯಾವುದೇ ಟೆಂಡರಗೆ ಒಳಪಡದೆ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಮಧ್ಯ ಡಬ್ಬಾ ಅಂಗಡಿ ಹಾಕಲಾಗಿದೆ. ಇದರಿಂದ ಮಳಿಗೆಗಳ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗಿದೆ ಎಂದರು.
ಮಳಿಗೆ ಮಾಲಿಕ, ವ್ಯಾಪಾರಸ್ಥ ಮಂಜುನಾಥ ಮಲಬನ್ನವರ ಮಾತನಾಡಿ, ’ಶಾಸಕರ ಪ್ರಯತ್ನದಿಂದ ಹೊಸದಾಗಿ ಬಸ್ ನಿಲ್ದಾಣ ನಿರ್ಮಿಸಿ ಸುಂದರ ಕಟ್ಟಡ ಕಟ್ಟಲಾಗಿದೆ. ಆದರೆ ಹೊಸ ಬಸ್ ನಿಲ್ದಾಣದ ಕಟ್ಟಡಕ್ಕೆ ಚ್ಯುತಿ ಬರುವಂತೆ ಪ್ಲಾಟ್ ಫಾರ್ಮ್ ಮಧ್ಯ ಡಬ್ಬಾ ಅಂಗಡಿ ಹಾಕಿರುವುದು ಸರಿಯಲ್ಲ. ಮಳಿಗೆಗಳ ಟೆಂಡರ್ ಹಾಕುವ ವೇಳೆ ಸ್ಪರ್ಧೆ ಹೆಚ್ಚಾಗಿದ್ದರಿಂದ ಸಾರಿಗೆ ಇಲಾಖೆಗೆ ಬಸ್ ನಿಲ್ದಾಣದ ಮಳಿಗೆಗಳಿಂದ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ. ಇದರ ಸಾಮಾನ್ಯ ಜ್ಞಾನ ಇಲ್ಲದ ಸಾರಿಗೆ ಇಲಾಖೆ ಮೇಲಾಧಿಕಾರಿಗಳು, ಘಟಕ ವ್ಯವಸ್ಥಾಪಕರರು ಬಸ್ ನಿಲ್ದಾಣದ ಪ್ಲಾಟ್ ಪಾರ್ಮ್ ಮಧ್ಯ ಡಬ್ಬಾ ಅಂಗಡಿ ಹಾಕಲು ಅನುಮತಿ ನೀಡಿ ತಮಗೆ ಯಾವುದೆ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಕೂಡಲೇ ಪ್ರಯಾಣಿಕರ, ಮಳಿಗೆಗಳ ವ್ಯಾಪಾರಸ್ಥರ ಹಿತದೃಷ್ಠಿಯಿಂದ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಮಧ್ಯ ಹಾಕಿರುವ ಅವೈಜ್ಞಾನಿಕ ಡಬ್ಬಾ ಅಂಗಡಿಯನ್ನು ತೆರುವುಗೊಳಿಸಬೇಕು. ಇಲ್ಲವಾದರೆ ಟೆಂಡರನ್ ಇಎಂಡಿ ಹಣ ನಮಗೆ ವಾಪಸ್ ನೀಡಬೇಕು’ ಎಂದು ಆಗ್ರಹಿಸಿದರು.
ವ್ಯಾಪಾರಸ್ಥ ಇಮ್ರಾನ್ ನಂದಗಡ ಮಾತನಾಡಿ, ’ಮಳಿಗೆಗಳ ವ್ಯಾಪಾರಸ್ಥರು ಮೂವತ್ತು ಸಾವಿರನಿಂದ ಒಂದುವರೆ ಲಕ್ಷದವರೆಗೆ ಹಣ ತುಂಬುತ್ತಿದ್ದಾರೆ. ಆದರೆ ಬಸ್ ನಿಲ್ದಾಣದ ಓಪನ್ ಪ್ಲೇಸ್ ನಲ್ಲಿ ನಂದಿನಿ ಫಾರ್ಲರ್, ಇನ್ಯಾವುದೇ ಅಂಗಡಿ ತೆರೆಯಲು ಅವಕಾಶ ನೀಡಿದರೆ ಮಳಿಗೆಗಳ ವ್ಯಾಪಾರ ಕಡಿಮೆ ಆಗುತ್ತದೆ. ಸಾರಿಗೆ ಘಟಕದ ಮೇಲಾಧಿಕಾರಿಗಳು, ಘಟಕ ವ್ಯವಸ್ಥಾಪಕರು ಕೂಡಲೇ ಇದನ್ನು ಗಮನ ಹರಿಸಿ ಡಬ್ಬಾ ಅಂಗಡಿ ತೆರುವುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಈ ಕುರಿತು ಘಟಕ ವ್ಯವಸ್ಥಾಪಕ ಶಿವಮೂರ್ತಿ ತಳವಾರ ಡಬ್ಬಾ ಅಂಗಡಿ ಹಾಕಿರುವ ಬಗ್ಗೆ ಸರಿಯಾಗಿ ಯಾವುದೇ ಮಾಹಿತಿ ಇಲ್ಲ ಎಂದರು. ವ್ಯಾಪಾರಸ್ಥರಾದ ನಿಂಗಪ್ಪ ಸುಣಗಾರ, ಗೀರೀಶ ಗೌಡರ, ಗುರು ಕಡತನಾಳ, ಶಿವು ಬಿಸನಕೊಪ್ಪ, ಅನೇಕರು ಇದ್ದರು.