5 ಮನೆಗಳಿಗೆ ಕನ್ನ: ಚಿನ್ನಾಭರಣ, ನಗದು ದೋಚಿಕೊಂಡು ಕಳ್ಳರು ಪರಾರಿ
ಲೋಕದರ್ಶನ ವರದಿ
ಬೈಲಹೊಂಗಲ 17: ಪಟ್ಟಣದ ವಿನಾಯಕ ನಗರ, ಪ್ರಭು ನಗರಗಳಲ್ಲಿ ಸುಮಾರು 5 ಮನೆಗಳಿಗೆ ಕನ್ನ ಹಾಕಿದ ಕಳ್ಳರು ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿದ್ದು, ಮೂರು ಮನೆಗಳ ಕಳ್ಳತನಕ್ಕೆ ಯತ್ನ ನಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸುಮಾರು 6 ರಿಂದ 7 ಜನ ಇದ್ದ ಕಳ್ಳರ ಗ್ಯಾಂಗ ಬೀಗ ಹಾಕಿದ ಮನೆಗಳಿಗೆ ಹೊಂಚು ಹಾಕಿದ್ದ ಕಳ್ಳರು ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪಟ್ಟಣದ ಪ್ರಭು ನಗರದ 2ನೇ ಕ್ರಾಸದಲ್ಲಿರುವ ಗುತ್ತಿಗೆದಾರ ಪಂಡರೀನಾಥ ಮಾಳೋದೆ ಅವರ ಮನೆಯಲ್ಲಿ 1200 ಗ್ರಾಂ.ಬೆಳ್ಳಿ, 31 ಗ್ರಾಂ ಬಂಗಾರ, ರೂ. 2 ಲಕ್ಷ ನಗದು, ತುಕಾರಾಮ ಮಾಳೋದೆ ಅವರ ಮನೆಯಲ್ಲಿ 77 ಗ್ರಾಂ ಬಂಗಾರ, 35 ಗ್ರಾಂ ಬೆಳ್ಳಿ, ರೂ. 40 ಸಾವಿರ ನಗದು ದೋಚಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳು ಮುದ್ರೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಚ್ಚುವರಿ ಎಸ್ ಪಿ ಎಂ.ವೇಣುಗೋಪಾಲ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಪಿಐ ಪಂಚಾಕ್ಷರಿ ಸಾಲಿಮಠ, ರಾಘವೇಂದ್ರ ಹವಾಲ್ದಾರ ಮತ್ತು ಸಿಬ್ಬಂದಿ ರಚಿಸಿ ಕಳ್ಳರನ್ನು ಬಂಧಿಸಲು ವ್ಯಾಪಕ ಜಾಲ ಬೀಸಲಾಗಿದೆ. ಪ್ರಕರಣ ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.
ಹೆಚ್ಚುವರಿ ಎಸ್ಪಿ ಎಂ.ವೇಣುಗೋಪಾಲ ಪತ್ರಿಕೆಯೊಂದಿಗೆ ಮಾತನಾಡಿ, ಬೈಲಹೊಂಗಲ ನಗರ ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿದ್ದು ವಿಶೇಷವಾಗಿ ಹೊರವಲಯದ ಮನೆಗಳ ಮಾಲೀಕರು ಬೇರೆ ಕಡೆ ಊರಿಗೆ ಹೋಗುವಾಗ ಮನೆಯಲ್ಲಿ ಬೆಲೆಬಾಳುವ ಆಭರಣಗಳು, ನಗದು ಹಣ ಇಡದೇ ಬ್ಯಾಂಕಿನಲ್ಲಿ ಇಟ್ಟು ಜಾಗರೂಕತೆ ವಹಿಸಬೇಕು. ಸಾರ್ವಜನಿಕರು ಕೂಡ ಪೊಲೀಸ ಇಲಾಖೆಯೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಬೇಕು ಎಂದರು.ಈಗಾಗಲೇ ಸಿಸಿ, ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು ಕಳ್ಳರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗವುದು. ಸ್ಥಳೀಯ ಶಾಸಕರ, ಪುರಸಭೆ ಸಹಕಾರದೊಂದಿಗೆ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಸಿಸಿ ಟವಿ ಆಳವಡಿಸಿಲು ಕೋರಲಾಗಿದೆ.ಅವರು ಕೂಡ ಭರವಸೆ ನೀಡಿದ್ದು, ಕ್ಯಾಮರಾ ಆಳವಡಿಸುವದರಿಂದ ಅಪರಾಧಿಗಳನ್ನು ಪತ್ತೆ ಹಚ್ಚಲು ತುಂಬಾ ಸಹಕಾರಿಯಾಗಲಿದೆ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ ಧರಿಸಬೇಕು ಎಂದು ಸೂಚಿಸಿದರು