ಬಾಲ ವಿಜ್ಞಾನಿಗಳ ನಿರ್ಮಾಣ ಮಾಡುವ ಶಿಕ್ಷಕಿ ಶಶಿಕಲಾಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಗರಿ
ಇಂಡಿ,04: ತಾಲೂಕಿನ ನಾದ ಕೆ ಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನೇಮಕಾತಿಯಾದಾಗಿನಿಂದ ಸತತ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಶಿಕಲಾ ಬಡಿಗೇರ ಅವರು 2024-25 ನೇ ಸಾಲಿನ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದು ಇಡೀ ತಾಲೂಕು-ಜಿಲ್ಲೆಗೆ ಸಂತಸ ತಂದಿದೆ.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತಾ, ಪ್ರಾಯೋಗಿಕ ವಿಜ್ಞಾನವನ್ನು ಮನವರಿಕೆ ಮಾಡಿಕೊಡುವಲ್ಲಿ ಇವರು ನಿರಂತರ ಪ್ರಯತ್ನಶೀಲರಾಗಿದ್ದಾರೆ.
ವೈಜ್ಞಾನಿಕ ಮಾದರಿಗಳೊಂದಿಗೆ ತಾಲೂಕು,ಜಿಲ್ಲೆ,ರಾಜ್ಯ,ರಾಷ್ಟ್ರ ಮಟ್ಟದ ತನಕ ವಿದ್ಯಾರ್ಥಿಗಳನ್ನು ಕೊಂಡೊಯ್ದ ಕ್ರಿಯಾಶೀಲ ವಿಜ್ಞಾನ ಶಿಕ್ಷಕಿ ಇವರಾಗಿದ್ದಾರೆ.2020 ರಲ್ಲಿ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಶಾಲೆಯ ದೇವೇಂದ್ರ ಬಿರಾದಾರ ಈತನು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ 28 ನೇ ಸ್ಥಾನ ಪಡೆದಿದ್ದು ಇವರ ಪರಿಶ್ರಮಕ್ಕೆ ತಂದ ಪ್ರತಿಫಲವಾಗಿದೆ.ಜತೆಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ಎರಡು ವರ್ಷ ಭಾಗವಹಿಸಿದ್ದು ವಿಶೇಷವಾಗಿದೆ. ಇವರ ಈ ಕ್ರಿಯಾಶೀಲತೆಗೆ 2022 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ.ಈಗ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಆಗಿದ್ದು,ಗ್ರಾಮೀಣ ಭಾಗದ ಶಾಲಾ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಿದ್ದು, ನಮಗೆಲ್ಲ ಅತೀವ ಸಂತಸ ತಂದಿದೆ.ಮುಂದೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಅವರಿಗೆ ಲಭಿಸಲಿ ಎಂದು ಶಾಲಾ ಮುಖ್ಯೋಪಾಧ್ಯಾಯ ಸಿ ಎಂ ಬಂಡಗರ ಶುಭ ಹಾರೈಸಿದರು.
ಪ್ರಶಸ್ತಿ ವಿಜೇತ ಶಿಕ್ಷಕಿ ಶಶಿಕಲಾ ಬಡಿಗೇರ ಅವರು, ಈ ಪ್ರಶಸ್ತಿ ಲಭಿಸಿದ್ದು,ಬಹಳ ಖುಷಿ ತಂದಿದೆ.ಈ ಪ್ರಶಸ್ತಿಯನ್ನು ನನ್ನ ಶಾಲಾ ಮಕ್ಕಳಿಗೆ ಅರ್ಿಸುತ್ತೇನೆ.ನನ್ನ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇವರ ಈ ಸಾಧನೆಗೆ ಶಾಲಾ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.