ವಿದೇಶಿಗರ ಗಮನ ಸೆಳೆದ ಬೆಳಗಾವಿಯ ಕೆ.ಎಲ್.ಇ ಆಯುರ್ವೇದ ಆಸ್ಪತ್ರೆ
ಲೋಕದರ್ಶನ ವರದಿ
ಬೆಳಗಾವಿ 12: ನಗರದ ಶಹಾಪುರದಲ್ಲಿರುವ ಕೆ.ಎಲ್.ಇ. ಶ್ರೀ ಬಿ.ಎಂ.ಕೆ. ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಗೆ ಜರ್ಮನಿ, ಬಲ್ಗೇರಿಯಾ ಹಾಗೂ ಆಸ್ಟ್ರೇಲಿಯಾ ದೇಶಗಳಿಂದ ಹಲವರು ಆಯುರ್ವೇದ ಚಿಕಿತ್ಸೆಗಾಗಿ ಆಗಮಿಸಿದ್ದು, ಚಿಕಿತ್ಸಾ ಪದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖ್ಯಾತ ಆಯುರ್ವೇದ ತಜ್ಞ ಡಾ. ರಾಜಶೇಖರ್ ವಿ. ಸನಪೇಟಿ ಅವರ ಮೇಲ್ವಿಚಾರಣೆ ಮತ್ತು ಆರೈಕೆಯಲ್ಲಿ ಚಿಕಿತ್ಸೆ ಪಡೆದ ವಿದೇಶಿ ಅತಿಥಿಗಳು, ಆಯುರ್ವೇದದ ಶಾಸ್ತ್ರೀಯ ಚಿಕಿತ್ಸಾ ಪದ್ಧತಿ, ಪಂಚಕರ್ಮ, ಆಹಾರ-ವಿಹಾರ ನಿಯಮಗಳು ಹಾಗೂ ವೈಯಕ್ತಿಕ ಆರೈಕೆಯಿಂದ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಭಾರತೀಯ ಆಯುರ್ವೇದ ಪದ್ಧತಿಯು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದ್ದು, ಬೆಳಗಾವಿಯ ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆಯು ಅಂತಾರಾಷ್ಟ್ರೀಯ ರೋಗಿಗಳ ನೆಚ್ಚಿನ ಚಿಕಿತ್ಸಾ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ. ಸುಹಾಸ್ ಕುಮಾರ್ ಶೆಟ್ಟಿ ತಿಳಿಸಿದರು. ಆಯುರ್ವೇದ ಚಿಕಿತ್ಸೆಯಿಂದ ತಮ್ಮ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಮತ್ತೊಮ್ಮೆ ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆಯುವ ಆಸೆಯನ್ನು ವಿದೇಶಿ ಅತಿಥಿಗಳು ವ್ಯಕ್ತಪಡಿಸಿದ್ದಾರೆ.