ಬೈಲಹೊಂಗಲ

ಬೈಲಹೊಂಗಲ ಬೀದಿ ಬದಿ ವ್ಯಾಪಾರಸ್ಥರ ಸಭೆ: ಸಮಸ್ಯೆಗಳ ಸುರಿಮಳೆ

ಬೈಲಹೊಂಗಲ ಬೀದಿ ಬದಿ ವ್ಯಾಪಾರಸ್ಥರ ಸಭೆ: ಸಮಸ್ಯೆಗಳ ಸುರಿಮಳೆ

ಬೈಲಹೊಂಗಲ 19: ಪಟ್ಟಣದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕುಂದು ಕೊರತೆಗಳ ಸಭೆ ನಡೆಯಿತು.   

ಬೀದಿ ಬದಿ ವ್ಯಾಪಾರಸ್ಥರ ಮುಖಂಡ ರಫೀಕ ಬಡೇಘರ ಮಾತನಾಡಿ, ಪುರಸಭೆ ಸಿಬ್ಬಂದಿಗಳಿಂದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ವಿನಾಕಾರಣ ಕಿರುಕುಳ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಯಾವುದೇ ಆದೇಶವಿಲ್ಲದೆ, ಯಾರಿಗೂ ಹೇಳದೆ, ಕೇಳದೆ ಏಕಾಏಕಿ ವ್ಯಾಪಾರಸ್ಥರ ಅಂಗಡಿಗಳನ್ನು ಎತ್ತಂಗಡಿ ಮಾಡಿ ತೊಂದರೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ಪುರಸಭೆ ಮುಖ್ಯಾಧಿಕಾರಿಯೇ ಅಧ್ಯಕ್ಷರಾಗಿದ್ದು, ಸಭೆಯ ಒಳಗೆ ಚರ್ಚೆ ಮಾಡಿದ್ದ ವಿಷಯಗಳಿಗೆ ಇಲ್ಲಿಯವರೆಗೆ ಒಂದು ಪರಿಹಾರ ಮಾಡಿಲ್ಲ. 4 ವರ್ಷದಲ್ಲಿ ವರ್ಷಕ್ಕೊಂದು ಸಭೆ ಕರೆದು ಚರ್ಚಿಸಿದ ವಿಷಯಗಳ ಇಲ್ಲಿಯವರೆಗೂ ಒಂದು ಪರಿಹಾರ ಮಾಡಿಲ್ಲವೆಂದು ಆರೋಪಿಸಿದರು.  

ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ  ಹೆಸರಿಗೆ ಮಾತ್ರ  ವ್ಯಾಪಾರಸ್ಥರ ಸಮಿತಿಯ ಸಭೆ ಮಾಡಲಾಗುತ್ತಿದೆ. ವ್ಯಾಪಾರಸ್ಥರ ಸಮಸ್ಯೆಗಳಿಗೆ ಪರಿಹಾರ ಯಾವಾಗ ಎಂದು ಪ್ರಶ್ನಿಸಿದರು. ಈ ರೀತಿ ಆದರೆ ಸಮೀತಿಗೆ ಎಲ್ಲ ಸದಸ್ಯರು ರಾಜೀನಾಮೆ ನೀಡುತ್ತೇವೆ. ವ್ಯಾಪಾರಸ್ಥರ ದಬ್ಬಾಳಿಕೆ ಮಾಡುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದರು.   

ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಯಾಗದಂತೆ ವ್ಯಾಪಾರ ಮಾಡಲು ಸೂಚಿಸಲಾಗುವುದು. ಪಟ್ಟಣದಲ್ಲಿ ಟ್ರಾಪೀಕ್ ಸಮಸ್ಯೆಯಾಗುತ್ತಿದ್ದು, ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಮಾಡಲಾಗುವುದು. ಪುರಸಭೆ ಸಿಬ್ಬಂದಿಗಳು ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಹಂತವರ ಮೇಲೆ ಕ್ರಮ ಜರುಗಿಸಲಾಗುವುದು. ಶೀಘ್ರ ವ್ಯಾಪಾರಸ್ಥರ ಸಮಿತಿಯ ಸದಸ್ಯರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿಕೊಡಬೇಕೆಂದು ಮುಖ್ಯಾಧಿಕಾರಿಗೆ ತಿಳಿಸಿದರು.   

ಸಿಪಿಐ ಪಂಚಾಕ್ಷರಿ ಸಾಲಿಮಠ ಮಾತನಾಡಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಟ್ರಾಫೀಕ್ ಸಮಸ್ಯೆ ಆಗದಂತೆ ವ್ಯಾಪಾರ ನಡೆಸಬೇಕು. ಏನೇ ತೊಂದರೆ, ಸಮಸ್ಯೆ ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದರು.   

ಮುಖ್ಯಾಧಿಕಾರಿ ವೀರೇಶ ಹಸಬಿ, ಸತೀಶ ಪಾಟೀಲ, ವ್ಯಾಪಾರಸ್ಥರಾದ ಹಮ್ಮಜದ್ ನಂದಗಡ, ಮಹ್ಮದಲಿ ಬಾಗೇವಾಡಿ, ಮೆಹಬೂಬ್ ಬಾಗೇವಾಡಿ, ಗೊರೆಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ