ಬಳ್ಳಾರಿ

ಬಳ್ಳಾರಿಯಲ್ಲಿ ‘ಅಂತರಾಷ್ಟ್ರೀಯ ದತ್ತು ಮಾಸಾಚರಣೆ-2026’ ಅಂಗವಾಗಿ ಜಾಗೃತಿ ಜಾಥಾ

ಬಳ್ಳಾರಿಯಲ್ಲಿ ‘ಅಂತರಾಷ್ಟ್ರೀಯ ದತ್ತು ಮಾಸಾಚರಣೆ-2026’ ಅಂಗವಾಗಿ ಜಾಗೃತಿ ಜಾಥಾ

ಲೋಕದರ್ಶನ ವರದಿ 

ದತ್ತು ಸ್ವೀಕಾರ ಪ್ರಕ್ರಿಯೆ ಕಾನೂನುಬದ್ಧವಾಗಿರಲಿ: ನ್ಯಾಯಾಧೀಶ ರಾಜೇಶ್ ಎನ್‌.ಹೊಸಮನೆ 

ಬಳ್ಳಾರಿ,ನ.11 :  ಮಕ್ಕಳಿಲ್ಲದ ದಂಪತಿಗಳು ಅಥವಾ ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವವರು ಕಾನೂನುಬದ್ಧ ಮಾರ್ಗವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌. ಹೊಸಮನೆ ಅವರು ಹೇಳಿದರು. 

ಮಕ್ಕಳ ರಕ್ಷಣಾ ನಿರ್ದೇಶನಾಲಯ (ಬೆಂಗಳೂರು), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ‘ಅಂತರಾಷ್ಟ್ರೀಯ ದತ್ತು ಮಾಸಾಚರಣೆ-2026’ ರ ಅಂಗವಾಗಿ ನಗರದ ಹಳೆಯ ಜಿಲ್ಲಾಧಿಕಾರಿಗಳ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. 

ತೊಟ್ಟಲಲ್ಲಿ ಬೆಳೆಯಬೇಕಾದ ಮಗು ಎಲ್ಲೂ ಅಕ್ರಮವಾಗಿ ಕಳ್ಳಸಾಗಣೆಯಾಗಬಾರದು. ಸಿಂಗಲ್ ಪೇರೆಂಟ್ ಅಥವಾ ಯಾವುದೇ ಕಾರಣದಿಂದ ಜನಿಸಿದ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು ಸರ್ಕಾರಿ ಯೋಜನೆಗಳಿದ್ದರೂ, ಹಲವರು ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು. 

ಮಕ್ಕಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುವವರಿಗೆ ಸುಮಾರು 5 ವರ್ಷಗಳ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಆಸ್ಪತ್ರೆಗಳಲ್ಲಿ ಅನಾಥ ಮಕ್ಕಳನ್ನು ಯಾರಾದರೂ ಅಕ್ರಮವಾಗಿ ದತ್ತು ಪಡೆಯಲು ಸಹಾಯ ಮಾಡಿದರೆ ಅಂಥವರಿಗೂ 3 ವರ್ಷಗಳ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಇದೆ ಎಂದು ತಿಳಿಸಿದರು. 

ಅನಾಥ ಮತ್ತು ವಿಶೇಷಚೇತನ ಮಕ್ಕಳಿಗೆ ಕಾನೂನುಬದ್ಧವಾಗಿ ಸೂಕ್ತ ಪೋಷಕರು ದೊರೆತು, ಅವರ ಭವಿಷ್ಯ ಸುರಕ್ಷಿತವಾಗಬೇಕೆಂಬುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. 


ಸುದ್ದಿ ಓದಿ