ಬೈಲಹೊಂಗಲ

ಬೀದಿ ಬದಿಯ ವ್ಯಾಪಾರಸ್ಥರ ಮೇಲೆ ಹಲ್ಲೆ : ಪುರಸಭೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ

ಬೀದಿ ಬದಿಯ ವ್ಯಾಪಾರಸ್ಥರ ಮೇಲೆ ಹಲ್ಲೆ : ಪುರಸಭೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ
ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣ ಎದುರು ಬೀದಿ ಬದಿಯ ವ್ಯಾಪಾರಸ್ಥರು ರಸ್ತೆ ಮೇಲೆ ತಳ್ಳೋ ಗಾಡಿ ಅಡ್ಡ ನಿಲ್ಲಿಸಿ ಬುಧವಾರ

ಮುಖ್ಯಾಂಶಗಳು 

*ಪುರಸಭೆ ವಿರುದ್ಧ ಘೋಷಣೆ 

*ಮುಖ್ಯಾಧಿಕಾರಿಗೆ ದಿಕ್ಕಾರ 

*ಹಲ್ಲೆ ಮಾಡಿದ ಸಿಬ್ಬಂದಿ ವಜಾಕ್ಕೆ ಆಗ್ರಹ 

ಬೈಲಹೊಂಗಲ 06 : ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಎದುರು ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ತಳ್ಳುವ ಗಾಡಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು. ಇದರಿಂದ ಆಕ್ರೋಶಗೊಂಡ ವ್ಯಾಪಾರಿಗಳು ಬುಧವಾರ ತಡ ರಾತ್ರಿ ರಸ್ತೆಗಿಳಿದು ದಿಢೀರ್ ಪ್ರತಿಭಟನೆ ನಡೆಸಿದರು. 

ಬಸ್ ನಿಲ್ದಾಣದ ಮುಖ್ಯ ರಸ್ತೆಯ ಎರಡು ಬದಿ ತಳ್ಳುವ ಗಾಡಿಗಳನ್ನು ಅಡ್ಡ ನಿಲ್ಲಿಸಿ ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಬೀದಿ ಬದಿಯ ಬಡ ವ್ಯಾಪಾರಸ್ಥರಿಗೆ ಯಾವುದೇ ನೋಟೀಸು ನೀಡದೆ ಏಕಾಏಕಿ ಬಂದು ಗಾಡಿಗಳನ್ನು ಎತ್ತಿಕೊಂಡು ಹೋಗಿದ್ದು ಅನ್ಯಾಯ. ಇದನ್ನು ಪ್ರಶ್ನಿಸಿದ ವ್ಯಾಪಾರಿಗಳ ಮೇಲೆ ಪುರಸಭೆ ಸಿಬ್ಬಂದಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಪುರಸಭೆ ಸಿಬ್ಬಂದಿ ದೌರ್ಜನ್ಯಕ್ಕೆ ದಿಕ್ಕಾರ,  ಬೇಕೇ, ಬೇಕೂ ನ್ಯಾಯ ಬೇಕು. ನ್ಯಾಯ ಸಿಗುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಘೋಷಣೆ ಮೊಳಗಿಸಿದರು. 

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾ ನಿರತರ ಮನ ಒಲಿಸಲು ಯತ್ನಿಸಿದರು. ಪೊಲೀಸರು ಪುರಸಭೆ ಮುಖ್ಯಾಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಪುರಸಭೆ ಆಡಳಿತ ವ್ಯವಸ್ಥೆಗೆ, ಸದಸ್ಯರ ವಿರುದ್ಧ ಮತ್ತಷ್ಟು ಅಸಮಾಧಾನ ಹೊರ ಹಾಕಿದರು. ಈ ವೇಳೆ ಕೆಲಕಾಲ ಉದಿಗ್ನ ವಾತಾವರಣ ನಿಮರ್ಾಣವಾಗಿತ್ತು. 

ಯುವ ಮುಖಂಡ ಶಿವು ಕುರುಬೇಟ, ಚಂದ್ರು ಹಲಗಿ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ, 'ಬಡ ವ್ಯಾಪಾರಸ್ಥರ ಮೇಲೆ ಪುರಸಭೆ ಸಿಬ್ಬಂದಿ ಬಂದು ಕಿರುಕುಳ ನೀಡಿ ದೌರ್ಜನ್ಯ ಎಸಗುತ್ತಿದ್ದಾರೆ. ಯಾರಿಗೂ ಯಾವುದೇ ನೋಟಿಸು ನೀಡದೆ ಗಾಡಿಗಳನ್ನು ತೆರುವುಗೊಳಿಸುತ್ತಿರುವುದು ಅನ್ಯಾಯ. ಮದ್ಯರಾತ್ರಿಯವರೆಗೂ ತೆರೆದುಕೊಂಡಿರುವ ಬಾರ್, ರೆಸ್ಟೋರೆಂಟ ವ್ಯಾಪಾರಸ್ಥರಿಗೆ ಇಲ್ಲದ ನಿಯಮ ಬೀದಿ ಬದಿಯ ವ್ಯಾಪಾರಸ್ಥರಿಗೆ ಏಕೆ?. ಪ್ಲಾಸ್ಟಿಕ್ ಮುಕ್ತ ಪುರಸಭೆ ಎನ್ನುವವರು ಪುರಸಭೆಯಲ್ಲಿಯೇ ಎಲ್ಲದಕ್ಕೂ ಪ್ಲಾಸ್ಟಿಕ್ ಬಳಸುತ್ತಿದೆ. ಕೂಡಲೇ ತೆಗೆದುಕೊಂಡು ಹೋಗಿರುವ ಗಾಡಿಗಳನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ನೀಡಬೇಕು. ದುಡಿದು ತಿನ್ನುವ ಬಡ ವ್ಯಾಪಾರಸ್ಥರಿಗೆ ವಿನಾಕಾರಣ ಕಿರುಕುಳ ನೀಡಬಾರದು. ವ್ಯಾಪಾರಸ್ಥರ ಮೇಲೆ ಹಲ್ಲೆ ಮಾಡಿದವರನ್ನು ವಜಾಗೊಳಿಸಬೇಕು. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದರು. ಬೀದಿ ಬದಿಯ ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಇದ್ದರು.


 

ಸುದ್ದಿ ಓದಿ