ಸಿದ್ದೇವಾಡಿ ಗ್ರಾಪಂ ಅಧ್ಯಕ್ಷರಾಗಿ ಅಶ್ವಿನಿ ಆಜೂರ ಅವಿರೋಧ ಆಯ್ಕೆ
ವೆಂಕಟೇಶ ದೇಶಪಾಂಡೆ
ಅಥಣಿ 10: ಕಾಗವಾಡ ಮತಕ್ಷೇತ್ರದ ಸಿದ್ಧೇವಾಡಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷರಾಗಿ ಅಶ್ವಿನಿ ರಮೇಶ ಆಜೂರ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 10 ಜನ ಸದಸ್ಯರಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ 7 ಜನ ಸದಸ್ಯರು ಪಾಲ್ಗೊಂಡಿದ್ದರು. ಈ ಪೈಕಿ ಅಶ್ವಿನಿ ಆಜೂರ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರಿಂದ ಅಶ್ವಿನಿ ಆಜೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ನೀರಾವರಿ ಇಲಾಖೆಯ ಅನೀಲ ಕರೋಶಿ ಘೋಶಿಸಿದರು.
ಈ ಮೊದಲು ಅಧ್ಯಕ್ಷರಾಗಿದ್ದ ಸತ್ಯವ್ವಾ ಕೃಷ್ಣಾ ಜೂಗಳೆ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ ಹಿನ್ನೆಲೆಯಲ್ಲಿ ಬಹುಮತ ಕಳೆದುಕೊಂಡಿದ್ದ ಸತ್ಯವ್ವಾ ಗ್ರಾಮ ಪಂಚಾಯತ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರಿಂದ ಜನೇವರಿ 10 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಬಿಜೆಪಿ ಯುವ ನಾಯಕ ಶ್ರೀನಿವಾಸ ಪಾಟೀಲ ನೇತೃತ್ವದಲ್ಲಿ ಸಿದ್ದೇವಾಡಿ ಗ್ರಾಮದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದೇವಾಡಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷೆ ಅಶ್ವಿನಿ ರಮೇಶ ಆಜೂರ ಹೇಳಿದರು.
ಅವರು ಸಿದ್ಧೇವಾಡಿ ಗ್ರಾಮದಲ್ಲಿ ನೂತನವಾಗಿ ಗ್ರಾಮ ಪಂಚಾಯತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಗ್ರಾಮದಲ್ಲಿ ನನ್ನ ಅಧಿಕಾರವಧಿಯಲ್ಲಿ ನರೇಗಾ ಯೋಜನೆ ಸಹಿತ ಇನ್ನುಳಿದ ಎಲ್ಲ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಅನುಷ್ಠಾನಗೊಳಿಸುವ ಮೂಲಕ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವುದಾಗಿ ಹೇಳಿದರು. ಜನಪರ ಆಡಳಿತಕ್ಕಾಗಿ ಗ್ರಾಮ ಪಂಚಾಯತನ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅವಿರೋಧ ಆಯ್ಕೆ ಪ್ರಕ್ರಿಯೆ ನಂತರ ನೂತನ ಅಧ್ಯಕ್ಷರಿಗೆ ಹಾಗೂ ಚುನಾವಣೆಯಲ್ಲಿ ಪಾಲ್ಗೊಂಡ ಸದಸ್ಯರಿಗೆ ಗ್ರಾಮಸ್ಥರು ಗುಲಾಲ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ನೂತನ ಅಧ್ಯಕ್ಷರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂತನ ಅಧ್ಯಕ್ಷರಿಗೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಯುವ ನಾಯಕ ಶ್ರೀನಿವಾಸ ಪಾಟೀಲ ಪರ ಘೋಷಣೆ ಕೂಗಿದರು.
ಬಿಜೆಪಿ ಧುರೀಣರಾದ ಮಹಾದೇವ ಕೋರೆ, ಈಶ್ವರ ಕುಂಬಾರೆ, ವಿನಾಯಕ ಬಾಗಡಿ, ಗ್ರಾಮ ಪಂಚಾಯತ ಸದಸ್ಯರಾದ ರೂಪಾಲಿ ಗಣಪತಿ ಚವ್ಹಾಣ, ಮತ್ತಣ್ಣ ಮಾಳಿ, ಕಮಲವ್ವಾ ಅಪ್ಪಾಸಾಹೇಬ ಖೋತ, ಸುಶಾಂತ ಶಿರೋಳೆ, ಮಾರೂತಿ ಖೋತ, ಬೌರವ್ವಾ ಶಿದರಾಯ ಕಣಗಲಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ಸಿದ್ಧೇವಾಡಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.