ಬೈಲಹೊಂಗಲ

ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ಸುದೀರ್ಘ ಸೇವೆ ಶ್ಲಾಘನೀಯ: ಪ್ಯಾಟಿ

ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ಸುದೀರ್ಘ ಸೇವೆ ಶ್ಲಾಘನೀಯ: ಪ್ಯಾಟಿ

ಬೈಲಹೊಂಗಲ 12: ಚಿತ್ರಕಲಾ ಶಿಕ್ಷಕಿ ಸುವರ್ಣಾ ಅಂಗಡಿ ಗುರುಮಾತೆಯ ಸುದೀರ್ಘ 30 ವರ್ಷದ ಸೇವೆ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್‌.ಪ್ಯಾಟಿ ಎಂದರು.   

ಅವರು ಸಮೀಪದ ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವರ್ಗಾವಣೆ ನಿಮಿತ್ಯ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಮಾತನಾಡಿ ಒಂದೇ  ಶಾಲೆಯಲ್ಲಿ ಸುದೀರ್ಘ ಸೇವೆ ಮಾಡಿ ಸಾಕಷ್ಟು ಮಕ್ಕಳಲ್ಲಿ ಕಲೆಯನ್ನು ಎಲೆ ಮರೆಯ ಕಾಯಿಯಂತೆ ತುಂಬುವುದಲ್ಲದೆ ತನು-ಮನ ಧನದ ಸೇವೆಯೊಂದಿಗೆ ನಯಾನಗರ ಸರಕಾರಿ ಪ್ರೌಢ ಶಾಲೆಗೆ ರೂ.1,01,111 ಹಾಗೂ ಪ್ರಾಥಮಿಕ ಶಾಲೆಗೆ ರೂ.10,000 ಒಟ್ಟು ಒಂದು ಲಕ್ಷದ ಹನ್ನೊಂದು ಸಾವಿರದ ಒಂದು ನೂರಾ ಹನ್ನೊಂದು ರೂಪಾಯಿ ಶಾಲೆಯ ಅಭಿವೃದ್ದಿಗೆ ಮಹಾದಾನ ನೀಡಿರುವುದು ಇತರರಿಗೆ ಮಾದರಿ ಹಾಗೂ ಅನುಕರಣೀಯ ಎಂದರು.  

ಸನ್ಮಾನ ಸ್ವಿಕರಿಸಿ ಗುರುಮಾತೆ ಸುವರ್ಣಾ ಅಂಗಡಿ ಮಾತನಾಡಿ ನಯಾನಗರ ಗ್ರಾಮದ ಜನತೆ ನನ್ನನ್ನು ಮನೆಯ ಮಗಳಂತೆ ಸ್ವೀಕರಿಸಿ ಸುದೀರ್ಘ 30 ವರ್ಷ ಮಕ್ಕಳ ಸೇವೆ ಸಲ್ಲಿಸಲು ಸದಾವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಯೆ ನನ್ನ ಸೇವೆಯನ್ನು ಮುಗಿಸುವ ಆಸೆ ಇತ್ತು. ಆದರೆ ಇಲಾಖೆಯ ಆದೇಶಕ್ಕೆ ಬದ್ದಳಾಗಿ ಬೈಲವಾಡ ಶಾಲೆ ಆಯ್ಕೆ ಮಾಡಿಕೊಂಡು ಸೇವೆಗೆ ಹಾಜರಾಗಿದ್ದೆನೆ. ಆ ಕಾರಣ ತವರು ಮನೆಯ ಋಣವನ್ನು ಎಂದೂ ತೀರಿಸಲು ಸಾದ್ಯವಿಲ್ಲ. ಆದರೂ ಕೂಡಾ ಮಕ್ಕಳ ಸೇವೆಯ ಮೂಲಕ ಮತ್ತು ಅಲ್ಪ ಕಾಣಿಕೆಯ ಮುಖಾಂತರ ತವರು ಮನೆಯ ಅಲ್ಪ ಭಾರವನ್ನು ಇಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ ಎಂಬ ಪ್ರಸನ್ನತೆ ನನ್ನಲ್ಲಿದೆ ಎಂದು ನುಡಿದರು.  

ಮುಖ್ಯ ಶಿಕ್ಷಕ ನಾಗೇಶ ಮಾಳನ್ನವರ ಮಾತನಾಡಿ, ಅಂಗಡಿ ಗುರುಮಾತೆಯರು ನೀಡಿದ ಒಂದು ಲಕ್ಷಕ್ಕೂ ಮಿಕ್ಕಿದ ಹಣವನ್ನು ಶಾಲೆಯ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಬಳಸಲಾಗುವದು ಎಂದರು. 

ಪ್ರಾಥಮಿಕ ಶಾಲೆಯಲ್ಲಿ ನಿವೃತ್ತರಾದ ಶಿಕ್ಷಕಿ ಪಿ.ಬಿ ಮಂತ್ರೋಪಕರ, ವರ್ಗಾವಣೆಗೊಂಡ ಪಿ.ಎಂ. ನಿಕ್ಕಮನವರ ಇವರನ್ನು ಸನ್ಮಾನಿಸಲಾಯಿತು.  

ನಿವೃತ್ತ ಪ್ರಾಚಾರ್ಯ ಮಹಾಂತೇಶ ಇಂಗಳಗಿ, ಶ್ರೀಕಾಂತಗೌಡ ಪಾಟೀಲ, ಮಲ್ಲಪ್ಪ ಕಾಂಬಳೆ,  ಮಲ್ಲಿಕಾರ್ಜುನ ಪೆಂಟೇದ,  ಎಂ.ಎಂ.ಸಂಗೊಳ್ಳಿ ಕೆ.ಎ.ಮಹಾಜನ,  ಎಂ.ಎಂ.ಕರವಿನಕೊಪ್ಪ, ಶಿಕ್ಷಕರು ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ