ಅನಂತಪುರ ಗ್ರಾಮ ಸಭೆ: 30 ಆಶ್ರಯ ಮನೆಗಳ ಹಂಚಿಕೆ
ಅಥಣಿ 05: ಅನಂತಪುರ ಗ್ರಾಮ ಪಂಚಾಯತನಲ್ಲಿ ಬಸವ ವಸತಿ ಹಾಗೂ ಅಂಬೇಡ್ಕರ ಆವಾಸ ಯೋಜನೆಯಡಿ 30ಆಶ್ರಯ ಮನೆ ಯೋಜನೆ ಹಂಚಿಕೆ ಸಂಬಂಧ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಹಬಗುಂಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ನೋಡಲ್ ಅಧಿಕಾರಿಗಳಾಗಿ ತಾಲೂಕಾ ಹಿಂದುಳಿದ ವರ್ಗಗಳ ಅಧಿಕಾರಿ ಶೀತಲ್ ಹೊಂಗಲ್ ಹಾಗೂ ವಿಸ್ತರಣಾಧಿಕಾರಿ ವೆಂಕಟೇಶ ಕುಲಕರ್ಣಿ ಆಗಮಿಸಿದ್ದರು.
ಸಭೆಯ ಪ್ರಾರಂಭದಲ್ಲಿ ಎಪ್ರಿಲ್ 4ರೊಳಗಾಗಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ 91 ಗ್ರಾಮಸ್ಥರ ಹೆಸರುಗಳನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿ ವ್ಹಿ.ಎಂ.ಸಂದ್ರಿಮನಿ ಓದಿ ಧೃಢೀಕರಿಸಿದರು. ಈ ಪೈಕಿ ಮನೆ ಇಲ್ಲದ ಬಡ ಫಲಾನುಭವಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಲವರು ಗ್ರಾಮ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಬೇಕು ಎಂದು ಪಟ್ಟು ಹಿಡಿದಾಗ ತಕ್ಷಣ ಮಧ್ಯ ಪ್ರವೇಶಿಸಿದ ಮಾಜಿ ಪಂಚಾಯತ ಸದಸ್ಯ ದಾದಾ ಶಿಂಧೆ ಇಂದು ಕರೆದಿರುವ ಗ್ರಾಮ ಸಭೆ ವಿಶೇಷ ಸಭೆಯಾಗಿದ್ದರಿಂದ ನೋಡಲ್ ಅಧಿಕಾರಿಗಳು ಮಾತ್ರ ಉಪಸ್ಥಿತರಿರುತ್ತಾರೆ. ಹೀಗಾಗಿ ಯಾರೂ ಗೊಂದಲ ಮಾಡಬಾರದು ಎಂದು ಹೇಳಿದರು.
ಬಡವರಿಗೆ ಮನೆ ಇಲ್ಲದ ನಿರ್ಗತಿಕರನ್ನು ಗುರುತಿಸಿ ಅಧಿಕಾರಿಗಳೊಂದಿಗೆ ಹಾಗೂ ಪಂಚಾಯತ ಸದಸ್ಯರೊಂದಿಗೆ ಪರೀಶೀಲಿಸಿ ಮನೆ ಹಂಚಿಕೆ ಮಾಡಲಾಗಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದ ಅವರು ಸಾಕಷ್ಟು ಪ್ರಯತ್ನ ಮಾಡಿ ಕಾಗವಾಡ ಶಾಸಕರ ವಿಶೇಷ ಶಿಫಾರಸ್ಸಿನ ಮೂಲಕ ರದ್ದಾದ ಮನೆಗಳನ್ನು ಮಂಜೂರು ಮಾಡಿಸಿದ್ದೇವೆ. ಮನೆಗಳ ಹಂಚಿಕೆ ಸಂಪೂರ್ಣ ಪಾರದರ್ಶಕವಾಗಿ ಮತ್ತು ಸರಕಾರದ ನಿಯಮಾನುಸಾರ ನಡೆದಿದೆ ಅಲ್ಲದೆ ಎಲ್ಲ ಪಂಚಾಯತ ಸದಸ್ಯರು ಪ್ರಾಮಾಣಿಕವಾಗಿ ಫಲಾನುಭವಗಳನ್ನು ಆಯ್ಕೆ ಮಾಡಿದ್ದಾರೆ ಎಂದರು.
ನಂತರ ಗ್ರಾಮಸ್ಥರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿ, ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವರು ಗ್ರಾಮ ಸಭೆಗೆ ಮಾತ್ರ ಆಗಮಿಸಿ ವಿವಾದ ಹುಟ್ಟು ಹಾಕಿ ಅಭಿವೃದ್ಧಿಗೆ ಅಡ್ಡಗಾಲು ಹಾಕುವವರು ಮೊದಲು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ದಾದಾ ಶಿಂಧೆ ಇವರು ಶಾಸಕ ಶ್ರೀಮಂತ ಪಾಟೀಲ ಹಾಗೂ ತಾಲೂಕಾ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸತತವಾಗಿ ಸಂಪರ್ಕಿಸಿ ಮನೆ ಮಂಜೂರು ಮಾಡಿಸಿಕೊಂಡು ಬಂದಿದ್ದು ನಾವೆಲ್ಲ ಸಹಕಾರ ನೀಡಬೇಕು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಪ್ರೇಮಾ ಸಾಲಿಮಠ, ಸದಸ್ಯರಾದ ಸಂಗೀತಾ ಮಾಳಿ, ಶೋಭಾ ಅಥಣೀಕರ, ಶಿದರಾಯ ಕರೋಲಿ, ಮಲ್ಲೇಶ ಮೇತ್ರಿ, ನೇತಾಜಿ ಜಾಧವ, ವಿಠ್ಠಲ್ ನಾಯಕ್, ವಿಠ್ಠಲ್ ಪಾಟೀಲ್, ಪೋಪಟ ನರೋಟಿ, ಧೋಂಡಿರಾಮ್ ಶಿಂಧೆ, ನಿಲಯ ಮೇಲ್ವಿಚಾರಕರ ಎ.ಎಂ.ಬ್ಯಾಕೋಡೆ, ನಾನಾ ಡಾಂಗೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.