ಅಥಣಿ

ಅಮ್ಮಾಜೇಶ್ವರಿ ನೀರಾವರಿ ಯೋಜನೆ ರಾಜ್ಯದಲ್ಲಿಯೇ ಮಾದರಿಯಾಗಬೇಕು: ಸವದಿ

ಅಮ್ಮಾಜೇಶ್ವರಿ ನೀರಾವರಿ ಯೋಜನೆ ರಾಜ್ಯದಲ್ಲಿಯೇ ಮಾದರಿಯಾಗಬೇಕು: ಸವದಿ

ಅಥಣಿ 21: 1468 ಕೋಟಿ ವೆಚ್ಚದ ಅಮ್ಮಾಜೇಶ್ವರಿ ನೀರಾವರಿ ಯೋಜನೆಯ ಪ್ರಥಮ ಹಂತದ ನೀರು ಹರಿಸುವ ಕಾಮಗಾರಿ 14 ತಿಂಗಳಲ್ಲಿ 2025 ಡಿಸೆಂಬರ ಅಂತ್ಯಕ್ಕೆ ಪ್ರಾರಂಭಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.  

ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಯ ಎಮ್‌.ಎಸ್‌.ಪೈಪುಗಳ ಜೋಡನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಅತ್ಯಾಧುನಿಕ ತಂತ್ರಜ್ಞಾನ ದಿಂದ ಪೈಪಗಳನ್ನು ಸ್ಥಳದಲ್ಲಿ ತಯಾರಿಸಿ ಭೂಮಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಆಲಮಟ್ಟಿ ಜಲಾಶಯವನ್ನು ಇನ್ನಷ್ಟು ಎತ್ತರಿಸಿದಾಗಲೂ ಕೂಡ ಜಾಕವೆಲ್ಲ ಮುಳುಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಈ ಯೋಜನೆ ರಾಜ್ಯದಲ್ಲಿಯೇ ಮಾದರಿಯಾಗಬೇಕು. ನಾನು ಘೋಷಿಸಿದ ದಿನಾಂಕದೊಳಗಾಗಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ ನನ್ನಿಂದ ವೈಯಕ್ತಿಕವಾಗಿ 101 ತೊಲೆ ಬಂಗಾರದ ಕಡಗ ಯೋಜನೆಯ ಪ್ರೊಜೆಕ್ಟ್‌ ಮ್ಯಾನೇಜರಗೆ ತೊಡಿಸುವೆ ಎಂದು ಹೇಳಿದರು.     ಈ ಯೋಜನೆ ಪೂರ್ಣಗೊಂಡ ನಂತರ ರೈತನ ಪ್ರತಿ ಜಮೀನಿಗೆ ಚೆಂಬರ ಅಳವಡಿಸಲಾಗುವುದು ಆ ಚೆಂಬರಗಳನ್ನು ಒಂದೇ ಕಡೆ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗುವುದು.  ಈ ಯೋಜನೆ ನೋಡಲು ಅನ್ಯ ರಾಜ್ಯದವರೂ ಬರುತ್ತಾರೆ ಕಾದು ನೋಡಿ ಎಂದು ಹೇಳಿದ ಅವರು ಇದೇ ಯೋಜನೆಯಲ್ಲಿ ಅಡಹಳ್ಳಟ್ಟಿ, ಬ್ಯಾಡರಟ್ಟಿ ಮತ್ತು ಬಾಳಿಗೇರಿ ಗ್ರಾಮಗಳಿಗೂ ನೀರು ಕೊಡುವ ಯೋಜನೆ ಸಿದ್ಧವಾಗಿದೆ ಎಂದರು.      ರಾಜಕಾರಣಿಗಳು, ಜನಪ್ರತಿನಿಧಿಗಳು ದೂರದೃಷ್ಟಿಯುಳ್ಳವರಾಗಿರಬೇಕು ಆಗ ಮಾತ್ರ ಜನಪರ ಕಾರ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಲು ಸಾಧ್ಯವಾಗುತ್ತದೆ. ಜನಪರ ಕಾರ್ಯಗಳು ಅನುಷ್ಠಾನಗೊಳ್ಳುತ್ತಿರುವಾಗ ವಿರೋಧ ಪಕ್ಷದ ಧುರೀಣರು ಟೀಕಿಸುವುದರಿಂದ ಜನರ ಮನಸ್ಸಿನಲ್ಲಿ ದೊಡ್ಡವರಾಗುವುದಿಲ್ಲ ಜನಪರ ಯೋಜನೆಗಳಿಗೆ ಸಹಕಾರ ನೀಡಬೇಕು ಆಗ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರಲು ಸಾಧ್ಯ ಎಂದರು. 

ನ್ಯಾಯವಾದಿ ಅಮೋಘ ಖೊಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕರಿ ಮಸೂತಿ ಏತ ನೀರಾವರಿ ಯೋಜನೆಯಿಂದ ವಂಚಿತ ಪ್ರದೇಶದಲ್ಲಿ ನೀರಿನ ಅಭಾವ ಉಂಟಾದ ಪರಿಣಾಮ ಸಾವಿರಡಿ ಕೊಳವೆ ಭಾವಿ ಕೊರೆದರೂ ನೀರು ಸಿಗುತ್ತಿಲ್ಲ ಹೀಗಾಗಿ ರೈತರು ಸಂಕಷ್ಟದಲ್ಲಿದ್ದು, ಇದಕ್ಕೆಲ್ಲ ಒಂದೇ ಒಂದು ಪರಿಹಾರ ಎಂದರೆ ಅದುವೇ ಅಮ್ಮಾಜೇಶ್ವರಿ ನೀರಾವರಿ ಯೋಜನೆಯ ಅನುಷ್ಠಾನ ಎಂದ ಅವರು ರೈತ ಪರ ನಿಲುವು ಹೊಂದಿರುವ ಶಾಸಕ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿಯೇ ಈ ಯೋಜನೆ 2026 ರ ಒಳಗಾಗಿಯೇ ಮುಕ್ತಾಯದ ಹಂತ ತಲುಪಲಿದೆ ಎಂದರು. 

ಕಾಂಗ್ರೆಸ್ ಮುಖಂಡ ಶಿವು ಗುಡ್ಡಾಪುರ ಮಾತನಾಡಿ, 2018 ರ ಚುನಾವಣೆಯಲ್ಲಿ ಅಮ್ಮಾಜೇಶ್ವರಿ ನೀರಾವರಿ ಯೋಜನೆಯ ಹೆಸರಿನಲ್ಲಿ ಆಯ್ಕೆಯಾದವರು ತಮ್ಮ ಅಧಿಕಾರದ ಹೆಚ್ಚಿನ ಸಮಯವನ್ನು ಮುಂಬೈದಲ್ಲಿ ಕಳೆದರು ಎಂದ ಅವರು ಜನಪರ ಶಾಸಕ ಲಕ್ಷ್ಮಣ ಸವದಿ ಮಾತ್ರ  ಈ ಯೋಜನೆಗೆ ಚಾಲನೆ ನೀಡಿದ್ದಾರೆ ಇದನ್ನು ನಾವ್ಯಾರೂ ಮರೆಯಬಾರದು ಎಂದರು. 

ಧುರೀಣರಾದ ಎಸ್‌.ಕೆ.ಬುಟಾಳಿ, ಶಾಂತಿನಾಥ ನಂದೇಶ್ವರ, ಶೇಖರ ನೇಮಗೌಡ, ಶ್ಯಾಮರಾವ ಪೂಜಾರಿ, ಗುರು ದಾಶ್ಯಾಳ, ಶಿವು ಗುಡ್ಡಾಪುರ, ಚಂದ್ರಕಾಂತ ಇಮ್ಮಡಿ, ಪುರಸಭಾ ಸದಸ್ಯರಾದ ದತ್ತಾ ವಾಸ್ಟರ್, ರಾಜಶೇಖರ ಗುಡೋಡಗಿ, ಪ್ರಮೋದ ಬಿಳ್ಳೂರ, ರವಿ ಭಡಕಂಬಿ,    ನೀರಾವರಿ ನಿಗಮದ  ಅಧಿಕ್ಷಕ ಅಭಿತಂತರ ನಾಗರಾಜ, ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಸಹಾಯಕ ಅಭಿಯಂತರರು ಭರತೇಶ ಮಹೇಷವಾಡಗಿ, ಶಿವಶರಣ ಕರಡಿ, ಮುರುಘೇಶ ಬೊಮ್ಮನಾಳೆ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. 

ಬಿಜೆಪಿ ಸಂಸ್ಥಾಪಕರಲ್ಲೊಬ್ಬರಾದ ದಿ.ಭಾವುರಾವ್ ದೇಶಪಾಂಡೆಯವರ ಹೆಸರಿನಿಂದ ಪ್ರಾರಂಭಗೊಂಡ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೇಂದ್ರದಿಂದ ಎನ್‌.ಒ.ಸಿ ದೊರಕಿದ ತಕ್ಷಣ ಪ್ರವೇಶಾತಿ ಪ್ರಾರಂಭಗೊಳ್ಳಲಿವೆ.ಲಕ್ಷ್ಮಣ ಸವದಿ 

ಶಾಸಕ ಅಥಣಿ* 


ಸುದ್ದಿ ಓದಿ