ರಾಯಬಾಗ

ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ : ಮಹೇಶಾನಂದ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ : ಮಹೇಶಾನಂದ ಸ್ವಾಮೀಜಿ


         ರಾಯಬಾಗ 29: ಹೆಣ್ಣು ಮಕ್ಕಳನ್ನು ಹೆತ್ತವರು ತಮ್ಮ ಮಗಳನ್ನು ಸಂಸ್ಕಾರಯುತ ರೈತರ ಮನೆಯ ಗಂಡು ಮಕ್ಕಳಿಗೆ ಮದುವೆ ಮಾಡಿಕೊಟ್ಟರೆ ಆ ಹೆಣ್ಣು ಮಗುವಿನ ಬಾಳು ನಂದಾದೀಪವಾಗುತ್ತದೆ ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮಿಜೀ ಹೇಳಿದರು.

         ಗುರುವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಉತ್ಸವ ಸಮಾರಂಭ ನಿಮಿತ್ತ ಹಮ್ಮಿಕೊಂಡಿದ್ದ ಹಿರಿಯರ ಸ್ಮರಣೆ ಹಾಗೂ ಆದಿ ಬಣಜಿಗ ಸಮುದಾಯದವರ ವಧುವರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮಗೆ ಜನ್ಮ ನೀಡಿ, ನಮ್ಮ ಜೀವನ ರೂಪಿಸುವ ತಂದೆತಾಯಿಯವರಿಗೆ ಗೌರವ ನೀಡಿ,

             ಅವರ ಸೇವೆ ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದು. ಅಮೂಲ್ಯವಾದ ಮನುಷ್ಯ ಜನ್ಮ ಹಾಳು ಮಾಡಿಕೊಳ್ಳದೇ, ಒಳ್ಳೆಯ ಆದರ್ಶ ಜೀವನ ನಡೆಸಬೇಕೆಂದರು.  ಧಾರವಾಡ-ಹರಲಾಪೂರದ ವಾಗ್ಮಿ, ಲೇಖಕ ಅಮೋಘಸ್ವಾಮಿ ಹಿರೇಮಠ ಮಾತನಾಡಿ, ನಮ್ಮ                                               ತಂದೆತಾಯಿಯವರು, ಹಿರಿಯರು, ರೈತರು, ಸೈನಿಕರು, ಶಿಕ್ಷಕರು ನಮಗೆ ಆದರ್ಶರಾಗಬೇಕು ಹೊರತು ಸಿನೆಮಾ ನಟ, ನಟಿಯರಲ್ಲ. ಇಂದಿನ ಶಿಕ್ಷಣ ನೀತಿಯಿಂದ ದೇಶದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರುವ ಅತ್ಯಂತ ಕಳವಳಕಾರಿ ವಿಷಯ, ಅವುಗಳು ಕಡಿಮೆಯಾಗಬೇಕಾದರೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಬೇಕು.

               ತಂದೆಯವರ ಹೆಸರಿನಲ್ಲಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲವಾಗಲು ಶಿಕ್ಷಣ ಸಂಸ್ಥೆ ಕಟ್ಟಿ, ಹಿರಿಯರ ಸ್ಮರಣೆ ಮಾಡುತ್ತಿರುವ ಎಲ್‌.ಬಿ.ಚೌಗುಲೆ ಅವರು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ಮುಕ್ತರಾಗಿ ಒಳ್ಳೆಯ ಶಿಕ್ಷಣ ಪಡೆದು, ಸಮಾಜಕ್ಕೆ ಮಾದರಿ ವ್ಯಕ್ತಿಯಾಗಬೇಕೆಂದರು.

                   ಸಂಸ್ಥೆಯ ಅಧ್ಯಕ್ಷ ಎಲ್‌.ಬಿ.ಚೌಗುಲೆ, ನಿರ್ದೇಶಕಿ ಐಶ್ವರ್ಯ ಚೌಗುಲೆ, ಪ್ರಾಚಾರ್ಯರಾದ ಎಸ್‌.ಎಸ್‌.ದಿಗ್ಗೇವಾಡಿ, ಎಸ್‌.ಎ.ನಾಂದನಿ, ಕೊಟ್ರೇಶ ಎಚ್‌.ಎಮ್‌., ಸಿದ್ದು ಚೌಗುಲೆ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ವಧುವರರು, ಪಾಲಕರು ಇದ್ದರು. 


ಸುದ್ದಿ ಓದಿ