ಖೋ-ಖೋ ಕಾರ್ಯಾಗಾರ ಆಯೋಜನೆಯಲ್ಲಿ ಅಕ್ಕಮಹಾದೇವಿ ವಿವಿ ಮಾದರಿ: ಡಾ. ನಾಗರಾಜ ವಾಯ್
ಲೋಕದರ್ಶನ ವರದಿ
ವಿಜಯಪುರ 24: ವಿದ್ಯಾರ್ಥಿನಿಯರಲ್ಲಿ ಕ್ರೀಡೆಗಳ ಕುರಿತ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವುದು ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿದೆ ಎಂದು ತಮಿಳುನಾಡಿನ ತಿರುವೂರಿನ ಕೇಂದ್ರಿಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ವಾಯ್. ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಹಯೋಗದಲ್ಲಿ ನ. 23 ರಿಂದ 26ರವರೆಗೆ ಹಮ್ಮಿಕೊಂಡಿದ್ದ ಖೋ-ಖೋ ಕ್ರೀಡೆಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕ್ರೀಡೆಗಳ ಕುರಿತು ಇಂತಹ ಕಾರ್ಯಾಗಾರಗಳನ್ನು ಆಯೋಜಿಸುವುದು ವಿರಳವಾಗಿದೆ. ಆದರೆ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿನಿಯರಿಗೆ ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಪರಿಚಯಿಸುತ್ತಿದೆ. ತಮಿಳುನಾಡಿನಲ್ಲಿ ದೈಹಿಕ ಶಿಕ್ಷಣ ಕ್ಷೇತ್ರ ಎಷ್ಟು ಪ್ರಗತಿ ಸಾಧಿಸಿದೆಯೋ, ಅಷ್ಟೇ ಶ್ರೇಷ್ಠವಾಗಿ ಈ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗವೂ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಚಂದ್ರಶೇಖರ ಮಾತನಾಡಿ, ಖೋ-ಖೋ ಕ್ರೀಡೆಯ ಇತಿಹಾಸ, ಬೆಳವಣಿಗೆ, ಪ್ರಸ್ತುತ ಕ್ರೀಡೆಯಲ್ಲಿ ಆಗಿರುವ ಬದಲಾವಣೆಗಳು, ನಿಯಮಗಳು ಹಾಗೂ ಅಂಕಣದ ಮಹತ್ವದ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.