ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಲೋಕಾಯುಕ್ತ ಅಧಿಕಾರಿಗಳ ಸಲಹೆ
ಬೈಲಹೊಂಗಲ 09: ಪಟ್ಟಣದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಬೆಳಗಾವಿ ವತಿಯಿಂದ ಸಾರ್ವಜನಿಕ ಆಡಳಿತದಲ್ಲಿ ಗುಣಮಟ್ಟ ಸುಧಾರಿಸುವತ್ತ ಒಂದು ಹೆಜ್ಜೆ ಕಾರ್ಯಕ್ರಮದಡಿ ಬುಧವಾರ ಕಾನೂನು ಅರಿವು ಮತ್ತು ಜನ ಸಂಪರ್ಕ ಸಭೆ ನಡೆಯಿತು.
ಬೆಳಗಾವಿ ಲೋಕಾಯುಕ್ತ ಅಧೀಕ್ಷಕ ಹಣಮಂತರಾಯ್ ಅಧ್ಯಕ್ಷತೆವಹಿಸಿ ಮಾತನಾಡಿ, 'ಕಾನೂನು ಅರಿವು ಹಾಗೂ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಿದ್ದು ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಮ್ಮ ತಮ್ಮ ಇಲಾಖೆಗೆ ಬರತ್ತಕ್ಕಂತ ಸಾರ್ವಜನಿಕರಿಗೆ ಸಹಕಾರ ನೀಡಲು ಹಾಗೂ ತಮ್ಮ ಯೋಜನೆಗಳ ಸೇವೆಗಳನ್ನು ಕಾಲ ಮಿತಿ ಒಳಗಡೆ ಒದಗಿಸಿ ಕೊಡುವ ಬಗ್ಗೆ ತಿಳಿಸಿದರು.
ಯಾವುದೇ ಇಲಾಖೆ ವಿರುದ್ಧ ಸಾರ್ವಜನಿಕ ದೂರು ಇದ್ದಲ್ಲಿ , ಯಾವ ರೀತಿ ಲೋಕಾಯುಕ್ತರಿಗೆ ದೂರು ಸಲ್ಲಿಸಬೇಕು ಮತ್ತು ಲೋಕಾಯುಕ್ತ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು. ಸಭೆಗೆ ಬಂದಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಅರ್ಜಿದಾರರಿಗೆ ಸ್ಥಳದಲ್ಲಿಯೇ ಚರ್ಚಿಸಿ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡಿಕೊಡುವಂತೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಕೆಲವರು ಬೈಲಹೊಂಗಲ ಸಬ್ ರಜಿಸ್ಟಾರ್ ಇಲಾಖೆ ಮೇಲೆ ದೂರು ನೀಡಿದರು. ಸಬ್ ರಜಿಸ್ಟಾರ್ ಕಚೇರಿಯಲ್ಲಿ ಏಜೆಂಟರ ಮುಖೇನ ಹೋದ ಕೆಲಸಗಳನ್ನು ಮಾತ್ರ ಬೇಗ ಮಾಡಿ ಕೊಡಲಾಗುತ್ತದೆ, ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಪಡೆಯಲಾಗುತ್ತಿದೆ ಎಂದು ಆಪಾದಿಸಿದರು.
ಉಪ ಅಧೀಕ್ಷಕರಾದ ಬಿ.ಎಸ್.ಪಾಟೀಲ, ಜಿಮ ರಘು, ಭರತ ಎಸ್. ಆರ್. ಎ.ಆರ್.ಕಲಾಧಗಿ, ವ್ಹಿ.ಎಸ್. ಅವಟಿ, ತಾಪಂ ಇಒ ಸುಭಾಷ ಸಂಪಗಾಂವಿ, ತಹಶೀಲ್ದಾರ ಜೆ.ಸಿ.ಅಷ್ಟಗಿಮಠ, ಸಿಪಿಐ ಪಂಚಾಕ್ಷರಿ ಸಾಲಿಮಠ, ಅನೇಕರು ಇದ್ದರು.