ಅಕ್ರಮ ಗಾಂಜಾ ಬೆಳೆ: ಆರೋಪಿ ಬಂಧನ
ಸಂಬರಗಿ ನವೆಂಬರ್ 04: ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಕೋಹಳ್ಳಿ ಗ್ರಾಮದಿಂದ ಕೆಲವೇ ದೂರದ ಅಂತರದಲ್ಲಿರುವ ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದಲ್ಲಿರುವ ಅರಿಶಿನ ತೋಟದಲ್ಲಿ 520 ಕೆಜಿ ಗಾಂಜಾವನ್ನು ಮಹಾರಾಷ್ಟ್ರದ ಜತ್ತ ಪೋಲೀಸರು ವಶಕ್ಕೆ ಪಡೆದು ಸಿಂಧೂರ ಗ್ರಾಮದ ಬಸಪ್ಪ ಕುಶಾಬಾ ಅಕಿವಾಡ(45) ಎಂಬಾತನನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಕರ್ನಾಟಕ ಗಡಿಯಲ್ಲಿರುವ ಸಿಂಧೂರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ತನ್ನ ಹೊಲದ ಅರಿಷಿನ ತೋಟದಲ್ಲಿ ಗಾಂಜಾ ಬೆಳೆಯುತ್ತಿರುವ ಖಚಿತ ಮಾಹಿತಿ ಪಡೆದು ಜತ್ತ ಪೋಲೀಸ್ ಠಾಣೆಯ ಸಿಪಿಐ ಉತ್ತಮ ಜಾಧವ ತಂಡ ದಾಳಿ ನಡೆಸಿ 520 ಕೆಜಿ ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ. ಆ ಗಾಂಜಾ ಗಿಡ 5-6 ಅಡಿ ಎತ್ತರವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಂಗ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಕ್ಷಿತ್ ಗೆಂಡಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮನಿಷಾ ಡುಬಲೆ, ಜತ್ತ ಡಿವೈಎಸ್ಪಿ ರತ್ನಾಕರ ನವಲೆ ಇವರ ಮಾರ್ಗದರ್ಶನದಲ್ಲಿ ಸಿಪಿಐ ಉತ್ತಮ ಜಾಧವ ಹಾಗೂ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಜತ್ತ ಪೊಲೀಸರು ಬಸಪ್ಪ ಅಕ್ಕಿವಾಟ ಇವರು ಗಾಂಜಾ ಎಲ್ಲೆಲ್ಲಿ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆ ನಡೆಸಿದ್ದಾರೆ. ಈ ಕುರಿತು ಜತ್ತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.