ಸಂವಿಧಾನ ರಕ್ಷಣೆಗಾಗಿ ದಲಿತ, ಶೋಷಿತ, ರೈತ-ಕಾರ್ಮಿಕರ ಒಗ್ಗಟ್ಟಿನ ಹೋರಾಟ ಅನಿವಾರ್ಯ: ಬಸವರಾಜ್ ಶೀಲವಂತರ್ ಕರೆ
ಕೊಪ್ಪಳ 29: "ಪ್ರಸ್ತುತ ಆಡಳಿತದಲ್ಲಿ ದೇಶಕ್ಕೆ ಮತ್ತು ಸಂವಿಧಾನಕ್ಕೆ ದೊಡ್ಡ ಅಪಾಯ ಎದುರಾಗಿದೆ ದಲಿತ,ಶೋಷಿತ,ರೈತ, ಕಾರ್ಮಿಕರ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಎಚ್ಚರಿಸಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಪುತ್ಥಳಿಯ ಆವರಣದಲ್ಲಿ ಜಿಲ್ಲಾ ಭ್ರಾತೃತ್ವ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ’ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಡಾ.ಬಿ, ಆರ್,ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ಬಳಿಕ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿ ಅಂಬೇಡ್ಕರ್, ಗಾಂಧಿ, ಬುದ್ಧ, ಬಸವಣ್ಣನವರ ವಿಚಾರಗಳ ಮೇಲೆ ಕೋಮುವಾದಿಗಳ ದಾಳಿ ನಡೆಯುತ್ತಿದೆ. ದೇಶದ ಶ್ರೇಷ್ಠ ಗ್ರಂಥವಾದ ಸಂವಿಧಾನಕ್ಕೆ ಇಂದು ಗಂಡಾಂತರ ಎದುರಾಗಿದ್ದು, ಅದನ್ನು ರಕ್ಷಿಸಲು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು,ರೈತರು ಹಾಗೂ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು" ಎಂದರು. ದಸಂಸ ಜಿಲ್ಲಾ ಮುಖಂಡರು ಹಾಗೂ ಯುವ ವಕೀಲರಾದ ಮಹಾಂತೇಶ ಚಾಕ್ರಿ ಮಾತನಾಡಿ
ಸಿಐಟಿಯು ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ ಮಾತನಾಡಿ"ಮನುಸ್ಮೃತಿಯ ಆಶಯಗಳಿಲ್ಲ ಎಂಬ ಕಾರಣಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಆರಂಭದಿಂದಲೂ ಸಂವಿಧಾನವನ್ನು ವಿರೋಧಿಸುತ್ತಿವೆ. ನಮ್ಮದೇ ಸಮುದಾಯದವರನ್ನು ನಮ್ಮ ವಿರುದ್ಧವೇ ಎತ್ತಿಕಟ್ಟಿ, ಹಳೆಯ ಗುಲಾಮಗಿರಿ ವ್ಯವಸ್ಥೆಯನ್ನು ಮರುಸ್ಥಾಪಿಸುವ ಹುನ್ನಾರ ನಡೆದಿದೆ. ಸಮಾನತೆಯ ವಿರೋಧಿ ಶಕ್ತಿಗಳ ವಿರುದ್ಧ ನಾವೆಲ್ಲರೂ ಸೈದ್ಧಾಂತಿಕವಾಗಿ ಒಂದಾಗಿ ಹೋರಾಟ ಮಾಡಬೇಕು" ಎಂದು ಕರೆ ನೀಡಿದರು. ದಸಂಸ ಜಿಲ್ಲಾ ಮುಖಂಡ ಸಿದ್ರಾಮ್ ಹೊಸ್ಮನಿ ಮಾತನಾಡಿ "ಧರ್ಮದ ಹೆಸರಿನಲ್ಲಿ ನಮ್ಮ ಯುವಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.
ಈಗಿನ ಯುವಕರು ಮೊಬೈಲ್ ಬಳಕೆಗೆ ಸೀಮಿತವಾಗದೆ, ಹಿಂದಿನಂತೆ ಜಾಗೃತಿ ಸೆಮಿನಾರ್ಗಳು ಹಾಗೂ ಹೋರಾಟಗಳ ಮೂಲಕ ಸಂವಿಧಾನ ಉಳಿಸಿಕೊಳ್ಳಬೇಕಿದೆ" ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ, "ಸಂವಿಧಾನ ಅಂಗೀಕಾರವಾದಾಗಿನಿಂದ ಈ ವರೆಗೂ ಅದರ ಆಶಯಗಳು ಸಾಮಾನ್ಯ ಜನರಿಗೆ ಪೂರ್ಣವಾಗಿ ತಲುಪಿಲ್ಲ. ಸಂವಿಧಾನದ ಅರಿವಿನ ಕೊರತೆಯಿಂದಲೇ ಸಂವಿಧಾನಕ್ಕೆ ಅಪಾಯ ಎದುರಾಗಿದೆ.ಸಂವಿಧಾನ ಸಭೆಗೆ ಡಾ: ಬಿ,ಆರ್, ಅಂಬೇಡ್ಕರ್ ಆಯ್ಕೆಯಾಗಲು ಮುಸ್ಲಿಂ ಲೀಗ್ ಮತ್ತು ಜೋಗೇಂದ್ರನಾಥ್ ಮಂಡಲ್ ಅವರು ಸ್ಥಾನ ತ್ಯಾಗ ಮಾಡಿದ್ದರು. ಅಂದಿನಿಂದಲೂ ದಲಿತ-ಮುಸ್ಲಿಂ ಒಗ್ಗಟ್ಟು ಗಟ್ಟಿಯಾಗಿದೆ. ಈ ಒಗ್ಗಟ್ಟನ್ನು ಒಡೆಯುವ ಕುತಂತ್ರಗಳನ್ನು ವಿಫಲಗೊಳಿಸಿ,ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳು ಒಂದಾಗಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು" ಎಂದು ಕರೆ ನೀಡಿದರು. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೂ ಬೋಧಿಸಿದರು. ಕಾರ್ಯಕ್ರಮದಲ್ಲಿ ಐಎಫ್ಟಿಯು ಗಂಗಾವತಿ ತಾಲೂಕು ಸಂಚಾಲಕ ಚಾಂದ್ ಪಾಷಾ, ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ನಿರುಪಾದಿ ಭೋವಿ,ಜಿಲ್ಲಾ ಕಾರ್ಮಿಕ ಸಂಘಟನೆಯ ಮುಖಂಡ ಜಾಫರ್ ಕುರಿ, ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಪೂಜಾರ ನರೇಗಲ್, ಕಟ್ಟಡ ಕಾರ್ಮಿಕ ಸಂಘಟನೆಯ (ಸಿಐಟಿಯು ಸಂಯೋಜಿತ) ಜಿಲ್ಲಾ ಅಧ್ಯಕ್ಷ ಖಾಸೀಮ್ ಸರ್ದಾರ್, ಮುಖಂಡರಾದ ಎಂ.ಅಲ್ಲಾಭಕ್ಷಿ, ನಿರುಪಾದಿ ಗುನ್ನಟ್ಟಿ, ಪಾಮಣ್ಣ ಕೆ. ಮಲ್ಲಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.