ಮಾತಿಗಿಂತ ಕೃತಿಯ ಮೂಲಕ ಜಗತ್ತಿಗೆ ಉತ್ತರ ನೀಡಿದವರು ಡಾ. ಶಿವಬಸವ ಮಹಾಸ್ವಾಮಿಗಳು : ಮಡಿವಾಳ ರಾಜಯೋಗೀಂದ್ರ ಶ್ರೀಗಳು
ಲೋಕದರ್ಶನ ವರದಿ
ಬೆಳಗಾವಿ 29 ; ಜಗತ್ತಿನಲ್ಲಿ ಮಾತನಾಡಿ ಕೆಟ್ಟವರು ಅನೇಕ ಜನ. ಆದರೆ ಮೌನವಿದ್ದು ವಿಜಯಶಾಲಿಯಾದವರು ಬಹಳ ಅಪರೂಪ. ತಮ್ಮ ಜೀವನದುದ್ದಕ್ಕೂ ವೇದಿಕೆಯನೇರಿ ಹೆಚ್ಚು ಮಾತನಾಡದೆ ಮೌನವಾಗಿದ್ದುಕೊಂಡು ತಮ್ಮ ಕೃತಿಯ ಮೂಲಕವೇ ಜಗತ್ತಿಗೆ ಉತ್ತರ ನೀಡಿದವರು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳು ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಶನಿವಾರ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 137 ನೇ ಜಯಂತಿ ಮಹೋತ್ಸವದ ಅಂಗವಾಗಿ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಅನುಭಾವ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಶ್ರೀಗಳು ಯಾವುದೇ ಗ್ಯಾರೆಂಟಿಗಳಿಲ್ಲದ ಸಮಯದಲ್ಲಿ ಬಡವರ, ನೊಂದವರ ಭಾಗ್ಯದ ಬೆಳಕಾಗಿ ಬಂದವರು ಶಿವಬಸವ ಮಹಾಸ್ವಾಮಿಗಳು ಎಂದರು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಎಲ್ಲೆಡೆಯೂ ದೊರೆಯುತ್ತಿದೆ. ಆದರೆ ಉತ್ತಮ ಸಂಸ್ಕಾರ ದೊರೆಯುವುದು ತೀರಾ ಕಷ್ಟವಾಗಿದೆ. ಹೆಚ್ಚು ಶಿಕ್ಷಣ ಹೊಂದಿದ ಸುಶಿಕ್ಷಿತರೇ ಸಂಸ್ಕಾರದ ಕೊರತೆಯಿಂದಾಗಿ ಇಂದು ಪೋಷಕರಿಗೆ ಶತ್ರುಗಳಾಗುತ್ತಿದ್ದಾರೆ. ಕಾರಣ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಅನಿವಾರ್ಯತೆಯೂ ಇದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿಯವರು ಮಾತನಾಡಿ ಈ ಪ್ರಕೃತಿಯಲ್ಲಿ ಹೂವು-ಮುಳ್ಳುಗಳಿರುವಂತೆ ಕತ್ತಲು-ಬೆಳಕು ಇರುವಂತೆ ಸಜ್ಜನ ಹಾಗೂ ದುರ್ಜನರಿದ್ದಾರೆ. ಯಾರ ಸಹವಾಸ ಮಾಡಬೇಕೆಂಬುದು ನಮ್ಮ ವಿವೇಚನೆಗೆ ಬಿಟ್ಟದ್ದು. ಒಳ್ಳೆಯ ಗುಣವುಳ್ಳ, ಸುಜ್ಞಾನಿಗಳ ಸ್ನೇಹ ಮಾಡುವುದರಿಂದ ನಮ್ಮಲ್ಲಿಯೂ ಒಳ್ಳೆಯ ವಿಚಾರಗಳು ಬೆಳೆಯುತ್ತವೆ ಮತ್ತು ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಅರಳಿಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಮಹಾಸ್ವಾಮಿಗಳು, ಹೊನ್ನಿಹಾಳದ ಬಸವರಾಜ ದೇವರು ಮಾತನಾಡಿದರು. ವಚನ ಕಟ್ಟುಗಳ ಮೆರವಣಿಗೆ : ಸಮಾರಂಭಕ್ಕೂ ಮುನ್ನ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀನಗರ ಉಧ್ಯಾನವನದಿಂದ ರುದ್ರಾಕ್ಷಿ ಮಠದ ವರೆಗೆ ಭವ್ಯವಾದ ವಚನ ಕಟ್ಟುಗಳ ಮೆರವಣಿಗೆ ಜರುಗಿತು. ಡಾ. ಶಿವಬಸವ ಮಹಾಸ್ವಾಮಿಗಳವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳು, ರುದ್ರಾಕ್ಷಿ ಮಠದ ಭಕ್ತರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.