ಅನೀಮಿಯಾ ತಡೆಗಟ್ಟುವಲ್ಲಿ ಸಂಸ್ಥೆಗಳ ಪಾತ್ರ ಅನನ್ಯ-ರವಿ ಗುಮಶೆಟ್ಟಿ
ತಾಳಿಕೋಟೆ 29 : ಅನೀಮಿಯಾ ತಡೆಗಟ್ಟುವಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೀಮಿಯಾ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದಕೊಳ್ಳಬೇಕು ಎಂದು ಬಸವೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಗುಮಶೆಟ್ಟಿ ಹೇಳಿದರು. ಅವರು ತಾಲ್ಲೂಕಿನ ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗುಜರಾತಿನ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ ,ಕಲಕೇರಿಯ ಸ್ವಾಭಿಮಾನ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ ವಿಜಯಪುರ, ಭಾರತೀಯ ಸುರಾಜ್ಯ ಸಂಸ್ಥೆ ಕನ್ನೂರ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಅನೀಮಿಯಾ ತಡೆಗಟ್ಟುವಿಕೆ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಶುಕ್ರವಾರ ಮಾತನಾಡಿದರು. ಅನೀಮಿಯಾ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದಕ್ಕೆ ಮುಖ್ಯ ಕಾರಣ ಇಂದಿನ ಅಹಾರ ಪದ್ದತಿಯಾಗಿದೆ. ಅನೀಮಿಯಾ ಮುಕ್ತ ಭಾರತಕ್ಕಾಗಿ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಲು ಇದಕ್ಕೆ ಸಹಕಾರಿಯಾಗಿ ರಾಜ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳು ನಿರಂತರವಾಗಿ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ಸ್ವಾಭಿಮಾನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಚಾಲಕಿ ಅಂಬಿಕಾ ಜಂಬಗಿ ಮಾತನಾಡಿ ಹಿಮೋಗ್ಲೋಬಿನ್ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಿ ಉತ್ತಮ ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ ಎಂದರು. ಈ ವೇಳೆ ಬಸವೇಶ್ವರ ಪದವಿ, ಪದವಿ ಪೂರ್ವ ಕಾಲೇಜುಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಕ್ತ ತಪಾಸಣೆಯನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮಲ್ಲಿ ಮಿಜಬಾ ಹಿಪ್ಪರಗಿ, ಮಲ್ಲು ಜಂಬಗಿ, ಬಸವರಾಜ್ ಕುಂಬಾರ, ಶ್ರೀದೇವಿ ಝಳಕಿ, ಶೋಭಾ ಹಡಪದ, ಗುರುರಾಜ್ ಮಾಡಗಿ, ವೀರೇಶ ಝಳಕಿ ಸೇರಿದಂತೆ ಇತರರು ಇದ್ದರು ತಾಳಿಕೋಟೆ ತಾಲ್ಲೂಕಿನ ಕಲಕೇರಿಯ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮ ಹಾಗೂ ರಕ್ತ ತಪಾಸಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.