ಇಂಡಿ

ಸಂಸ್ಕೃತಿಯ ಸಂಕೇತ ಹೆಣ್ಣುಮಕ್ಕಳ ಗುಳ್ಳವ್ವನ ಹಬ್ಬ

ಸಂಸ್ಕೃತಿಯ ಸಂಕೇತ ಹೆಣ್ಣುಮಕ್ಕಳ ಗುಳ್ಳವ್ವನ ಹಬ್ಬ

ಸಚೀನ ಇಂಡಿ 

ಇಚಿಡಿ 17:  ಉತ್ತರ ಕರ್ನಾಟಕದಲ್ಲಿ ಬರುವ ಗ್ರಾಮೀಣ ಹಬ್ಬಗಳಲ್ಲಿ ವಿಶೇಷತೆ ಹಾಗೂ ವೈಶಿಷ್ಟತೆಯನ್ನು ಹೊಂದಿರುವ "ಗುಳ್ಳವ್ವನ ಹಬ್ಬ"ಮಂಗಳವಾರದಿಂದ ಪ್ರಾರಂಭಗೊಂಡಿದೆ ಸಂಸ್ಕೃತಿಯ ಸಂಕೇತವಾಗಿರುವ ಹಬ್ಬ. ಅದರಲ್ಲೂ ಹೆಣ್ಣು ಮಕ್ಕಳ ಅಚ್ಚು ಮೆಚ್ಚಿನ ಹಬ್ಬವಾಗಿದೆ.ಆಷಾಡ ಮಾಸದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗುಳ್ಳವ್ವನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗುಳಕವ್ವ, ಗೋಲಕವ್ವ ಎಂಬ ವಿವಿಧ ಹೆಸರಿನಿಂದ ಕರೆಸಿಕೊಳ್ಳುವ ಗುಳ್ಳವ್ವ ಜನಪದರ ದೇವತೆಯಾಗಿದ್ದಾಳೆ.ಮಣ್ಣಿನಿಂದ ಮಾಡುವ ಗುಳ್ಳವ ಭೂದೇವಿಯ ಅವತಾರವಿದ್ದಂತೆ, ಗ್ರಾಮೀಣ ಜನರ ಒಂದು ಅಪರೂಪದ ಹಬ್ಬವೆನಿಸಿರುವ, ಗುಳ್ಳವ್ವ ಆಷಾಡದ ಮೊದಲನೆ ಮಂಗಳವಾರದಿಂದ ಸುಮಾರು ಒಂದು ತಿಂಗಳಕಾಲ (4 ವಾರ) ಪ್ರತಿ ಮಂಗಳವಾರ ಮಣ್ಣಿನಿಂದ ಮಾಡಿದ ಗುಳ್ಳವ್ವನ ತಂದು ಶೃಂಗಾರ ಮಾಡಿ ಪೂಜೆ ಮಾಡುತ್ತಾರೆ. ಅಂದು ಸಂಜೆ ಚಿಕ್ಕ ಮಕ್ಕಳು ಆರತಿ ತೆಗೆದುಕೊಂಡು ಮನೆ ಮನೆಗೆ ಹೋಗಿ ಗುಳ್ಳವನ ಹಾಡುಗಳನ್ನು ಹಾಡಿ ಆರತಿ ಎತ್ತುತ್ತಾರೆ.  

ಮರುದಿನ (ಬುಧವಾರ) ಮನೆಗಳಲ್ಲಿ ಹಲವಾರು ಬಗೆಯ ಸಿಹಿ ಅಡುಗೆ,ದಪಾಟಿ,ಭಕ್ಷ ಭೋಜನಗಳನ್ನು ತಯಾರಿಸಿಕೊಂಡು ತೋಟ, ಉದ್ಯಾನವನ, ದೇವಸ್ಥಾನ, ನದಿ ಹಾಗೂ ಕೆರೆಯ ದಡಗಳಲ್ಲಿ ಹೋಗಿ ಊಟ ಮಾಡಿ ಸಂಜೆವರೆಗೆ ಹರಟೆ ಹೊಡೆದು ಕಾಲಕಳೆಯುವ ಸಂಪ್ರದಾಯ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ.ಇಂತಹ ಗುಳ್ಳವ್ವನ ಕುರಿತು ಹಾಡುಗಳು ಜಾನಪದ ಸಾಹಿತ್ಯದಲ್ಲಿ ಸಾಕಷ್ಟು ಕಂಡು ಬರುತ್ತವೆ.  

ಈ ಹಾಡುಗಳಲ್ಲಿ ಜಾನಪದದ ಸೋಬಗು ಅಡಗಿದ್ದು, ಈ ಹಾಡುಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಕೊಂಚ ಬಿನ್ನವಾಗಿರುತ್ತವೆ. ಇಂತಹ ಮಣ್ಣಿನ ಗುಳ್ಳವಳೆಂದರೆ ಹೆಣ್ಣು ಮಕ್ಕಳಿಗೆ ಬಲು ಅಚ್ಚು ಮೆಚ್ಚು.  

ಈ ಗ್ರಾಮೀಣ ಹಬ್ಬಗಳು ಹಾಗೂ ಜಾನಪದ ಸಂಗೀತ ಆಧುನಿಕತೆ ಟಿವಿ, ಸಿನಿಮಾ, ಅಂತರಜಾಲದಿಂದಾಗಿ ನಟಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಜಾನಪದ ಜಗತ್ತಿನಲ್ಲಿ ಗುಳ್ಳವ್ವ ಮತ್ತು ಆಕೆಯ ಹಾಡುಗಳು ಮಾತ್ರ ಯಾವಾಗಲೂ ಜೀವಂತ.ಗುಳ್ಳವನ ಪೂಜೆ ಎಂದರೆ ಅದು ಮಣ್ಣಿನ ಪೂಜೆ. ನಮ್ಮ ರೈತರು ಪ್ರತಿವರ್ಷ ಆಯಾ ಸಂದರ್ಭಕ್ಕೆ ಅನುಗುಣವಾಗಿ ಐದು ಬಾರಿ ಮಣ್ಣಿನ ಪೂಜೆಯನ್ನು ಮಾಡಿ ಹಬ್ಬಗಳನ್ನು ಆಚರಿಸುತ್ತಾರೆ. ಒಂದು ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ ಎತ್ತುಗಳ ಪೂಜೆ ಮಾಡಲಾಗುತ್ತದೆ.ನಂತರ ಆಷಾಢದಲ್ಲಿ ಗುಳ್ಳವ್ವ, ಶ್ರಾವಣ ಮಾಸದಲ್ಲಿ ಮಣ್ಣಿನ ನಾಗದೇವತೆಯ ಪೂಜೆ, ಭಾದ್ರಪದದಲ್ಲಿ ಗಣೇಶನ ಪೂಜೆ ಮತ್ತು ಕೊನೆಯದಾಗಿ ಶೀಗವ್ವ ಇಲ್ಲವೆ ಗೌರಿಯ ಪೂಜೆಯನ್ನು ನೆರವೇರಿಸುತ್ತಾರೆ.ಇದು ಭವ್ಯ ಭಾರತದ ಸಾಂಸ್ಕೃತಿಕ ಹಾಗೂ ಪರಂಪರೆಯನ್ನು ಬಿಂಬಿಸುತ್ತದೆ. 


ಸುದ್ದಿ ಓದಿ