ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ:ಡಾ. ನಿಷ್ಠೆ ರುದ್ರಪ್ಪ
ಬಳ್ಳಾರಿ 31: ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡುವಂತೆ ಕ್ರಮ ವಹಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠೆ ರುದ್ರಪ್ಪ ರವರು ಮಾತನಾಡಿ, ನಗರವು ಸೇರಿದಂತೆ ಇಡೀ ಜಿಲ್ಲೆಯಲ್ಲಿ ಅನೇಕ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಂಗಡಿಕಾರರು ಅನ್ಯ ಭಾಷೆಗೆ ಪ್ರಾತಿನಿಧ್ಯ ನೀಡಿ ನಾಮಕ ಅವಸ್ಥೆ ಎನ್ನುವಂತೆ ಬಹು ಸಣ್ಣ ದಾಗಿ ತೆಳುವಾಗಿ ತಮ್ಮ ಅಂಗಡಿಯ ನಾಮಫಲಕಗಳನ್ನು ಕನ್ನಡದಲ್ಲಿ ಹಾಕಿರುವುದನ್ನು ಗಮನಿಸಿದ್ದೇವೆ.
ಅದೇ ರೀತಿ ಜಾಹಿರಾತು ಫಲಕಗಳಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಕಡೆಗಣಿಸಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿರುವುದನ್ನು ಕಾಣಬಹುದಾಗಿದೆ.ಕರ್ನಾಟಕ ಸರ್ಕಾರದ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದ ಕಾನೂನಿನಂತೆ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಇರಬೇಕೆಂಬ ಕಾನೂನು ಇದೆ. ತಾವು ಈ ಸಮಿತಿಯ ಅಧ್ಯಕ್ಷರಾಗಿ ಸಭೆಯನ್ನು ನಡೆಯಿಸಿ ಸೂಚನೆ ನೀಡಿದಾಗ್ಯೂ ಇದನ್ನು ಜಾರಿಗೊಳಿಸಬೇಕಾಗಿರುವ ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆಗಳ ದಿವ್ಯ ನಿರ್ಲಕ್ಷದಿಂದಾಗಿ ಪರಿಣಾಮಕಾರಿಯಾಗಿ ಈ ಕಾನೂನು ಸಮರ್ಕವಾಗಿ ಜಾರಿ ಮಾಡಲಾಗುತ್ತಿಲ್ಲವೆಂಬುದು ಖೇದಕರ ಸಂಗತಿಯಾಗಿದೆ.ಹಾಗೂ ಇದೆ ವಿಷಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಚರ್ಚೆಯಾಗುತ್ತಿದೆ.
ಅಲ್ಲದೆ ಪತ್ರಿಕೆಗಳಲ್ಲಿಯೂ ಈ ಬಗ್ಗೆ ವರದಿಗಳು ಬಂದರೂ ಅಧಿಕಾರಿಗಳು ವಾಣಿಜ್ಯ ಮಳಿಗೆಗಳ ಮೇಲೆ ಮತ್ತು ಜಾಹಿರಾತು ನೀಡಿರುವವರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಅಧಿಕಾರಿಗಳ ಮಟ್ಟದಲ್ಲಿ ಸಭೆ ಕರೆದು ಚರ್ಚಿಸಬೇಕಾಗಿ ಮತ್ತು ಈ ಬಗ್ಗೆ ತಿಂಗಳಲ್ಲಿ ಒಂದು ದಿನ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಈ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಕೋರುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಸಾಪ ಕೋಶಾಧ್ಯಕ್ಷರಾದ ಡಾ. ಬಸವರಾಜ ಗದಗಿನ, ನಗರ ಅಧ್ಯಕ್ಷರಾದ ಕೆ ವಿ ನಾಗರೆಡ್ಡಿ ಗ್ರಾಮೀಣ ಅಧ್ಯಕ್ಷರಾದ ಎರ್ರಿಸ್ವಾಮಿ, ಕನ್ನಡ ಪರ ಸಂಘಟನೆಗಳ ಮುಖಂಡರುಗಳಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅಂಗಡಿ ಶಂಕರ್, ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಚಂದ್ರಶೇಖರ ಆಚಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜು ಒಡೆಯರ್, ಕಲಾವಿದರ ಸಂಘದ ಅಧ್ಯಕ್ಷರಾದ ಯಲ್ಲನಗೌಡ ಶಂಕರ ಬಂಡೆ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ್, ನವ ಕರ್ನಾಟಕ ಯುವಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಸಿದ್ಮಲ್ ಮಂಜುನಾಥ್ ದೇವೇಶ್, ಕರ್ನಾಟಕ ಏಕೀಕರಣ ರಕ್ಷಣಾ ವೇದಿಕೆಯ ಅಧ್ಯಕ್ಷ ಶೇಖರ್ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಮುದಟ್ನೂರು ತಿಪ್ಪೇಸ್ವಾಮಿ, ಕರ್ನಾಟಕ ಯುವಕ ಸಂಘದ ಮುಂಡಾಸದ ಮಲ್ಲಿಕಾರ್ಜುನ, ಸಾಹಿತಿಗಳಾದ ದಸ್ತಗಿರಿ ಸಾಬ್ ದಿನ್ನಿ, ವೀರೇಂದ್ರ ರವಿಹಾಳ್, ರಂಗ ಕಲಾವಿದ ಪುರುಷೋತ್ತಮ ಹಂದಿಹಾಳ್ , ಇಂದಿರಾ, ಗಂಗಾವತಿ ವೀರೇಶ್ ಕೋರಿ ವಿರೂಪಾಕ್ಷಪ್ಪ ವಿವಿಧ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.