ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 23ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಅಥಣಿ 18: ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಪೂರೈಕೆ ಮಾಡುವ ಕಬ್ಬಿನ ತೂಕದಲ್ಲಿ 1 ಕೆ.ಜಿ ಮೋಸ ಆಗಿದೆ ಎಂದು ರೈತನೋರ್ವ ಧೃಢಪಡಿಸಿದ ಮರುಕ್ಷಣವೇ ನಾನು ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದು ಕಾರಖಾನೆ ಅಧ್ಯಕ್ಷ ಪರ್ಪ ಸವದಿ ಹೇಳಿದರು. ಅವರು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ 23 ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪ್ರತಿ ಹಂಗಾಮಿನಲ್ಲಿಯೂ ನಮ್ಮ ಸುತ್ತಮುತ್ತಲಿನ ಅನೇಕ ಕಾರಖಾನೆಗಳ ವಿರುದ್ಧ ತೂಕದಲ್ಲಿ ಮೋಸ ಆಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ ಆದರೆ ಒಂದು ಬಾರಿಯೂ ನಮ್ಮ ಕಾರಖಾನೆ ವಿರುದ್ಧ ಆರೋಪಗಳು ಕೇಳಿ ಬಂದಿಲ್ಲ ಎಂದ ಅವರು ರೈತರ ಕಾರಖಾನೆಯಾಗಿದ್ದರಿಂದ ಯಾವ ರೀತಿಯಿಂದಲೂ ರೈತರಿಗೆ ಮೋಸ ಆಗದಂತೆ ನಮ್ಮ ಕಾರಖಾನೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಹಕಾರಿ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರಖಾನೆಯನ್ನು ಗಟ್ಟಿಗೊಳಿಸಬೇಕು ಎಂದ ಅವರು ಅಥಣಿ ತಾಲೂಕಿನಲ್ಲಿಯೇ 5 ಖಾಸಗಿ ಮತ್ತು ತಾಲೂಕಿನ ಸುತ್ತಮುತ್ತ ಅನೇಕ ಖಾಸಗಿ ಕಾರಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪೈಪೋಟಿ ಅಥವಾ ಆಮೀಶಗಳಿಗೆ ಒಳಗಾಗದೇ ಸಹಕಾರಿ ಕಾರಖಾನೆಗೆ ಕಬ್ಬು ಪೂರೈಸಿ ಎಂದು ಮನವಿ ಮಾಡಿದರು.
ಕಳೆದ 20 ವರ್ಷಗಳಿಂದ ನಮ್ಮ ಕಾರಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 350 ಕಾರ್ಮಿಕರನ್ನು ಖಾಯಂಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ ಅನೇಕ ಕಾನೂನು ತೊಡಕುಗಳು ಇದ್ದರೂ ಕೂಡ ಅವುಗಳನ್ನು ಸರಿ ಪಡಿಸಿ ಖಾಯಂಗೊಳಿಸಿದ್ದೇವೆ ಎಂದ ಅವರು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರು ಕಾರಖಾನೆಗೆ ಕಬ್ಬು ಪೂರೈಕೆ ಮಾಡುವ ರೈತರ ಮಕ್ಕಳಾಗಿದ್ದರಿಂದ ಅವರನ್ನು ಖಾಯಂಗೊಳಿಸುವುದು ನಮ್ಮ ಜವಾಬ್ದಾರಿಯಾಗಿತ್ತು ಎಂದು ಹೇಳಿದರು.
ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಮಾತನಾಡಿ, ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 8 ಲಕ್ಷ ಕಬ್ಬು ನುರಿಸುವ ಗುರಿ ಇಟ್ಟುಕೊಂಡಿದ್ದು, ರೈತರು ತಮ್ಮ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರಖಾನೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದ ಅವರು ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕಾರಖಾನೆಯಲ್ಲಿ 2015 ರ ವರೆಗೆ ಕಾರ್ಯನಿರ್ವಹಿಸುತ್ತಿದ್ದ 350. ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಲ್ಯಾಳ ವೀರಕ್ತ ಮಠದ ಗುರುಸಿದ್ಧ ಸ್ವಾಮೀಜಿ, ಹಣಮಾಪುರದ ಅಮರೇಶ್ವರ ಮಹಾರಾಜರು ಸಾನಿಧ್ಯ ವಹಿಸಿ ಮಾತನಾಡಿದರು, ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ, ಬಾಡಗಿಯ ವನಸಿದ್ಧ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾರ್ಮಿಕ ಸಂಘದ ಅಧ್ಯಕ್ಷ ಎಮ್.ಟಿ.ಬೊರಗಾಂವಿ ಮಾತನಾಡಿ ಕಾರ್ಮಿಕರ ಖಾಯಂ ಮಾಡಲು ಸಹಕರಿಸಿದ ಕಾರಖಾನೆ ಅಧ್ಯಕ್ಷ ಪರ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 5 ಜನ ಕಾರ್ಮಿಕರಿಗೆ ಖಾಯಂಗೊಳಿಸಿದ ದಾಖಲಾತಿಯನ್ನು ನೀಡಲಾಯಿತು. ಕಾರಖಾನೆ ನಿರ್ದೇಶಕ ಘೂಳಪ್ಪ ಜತ್ತಿ ಸ್ವಾಗತಿಸಿದರು, ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾರಖಾನೆಯ ಆಡಳಿತ ಮಂಡಳಿ ಸದಸ್ಯರು, ಕಬ್ಬು ಬೆಳೆಗಾರರು, ಸಿಬ್ಬಂದಿ ಮತ್ತು ಕಾರ್ಮಿಕ ವರ್ಗದ ಸದಸ್ಯರು ಉಪಸ್ಥಿತರಿದ್ದರು.