ನ. 21 ಮತ್ತು 22 ರಂದು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ
ನ. 21 ಮತ್ತು 22 ರಂದು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ
ಧಾರವಾಡ 19 : ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ನವೆಂಬರ 21 ರಿಂದ 23 ವರೆಗೆ ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ 21, 2024 ರಂದು ಬೆಳಿಗ್ಗೆ 10 ರಿಂದ 1:30 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 5 ರವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸಲಿದ್ದಾರೆ.
ಸರ್ಕಾರಿ ಅಧಿಕಾರಿ, ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದಲ್ಲಿ ಅಥವಾ ಅಧಿಕಾರಿ, ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ ಸಾಕ್ಷಾಧಾರಗಳೊಂದಿಗೆ ಸಲ್ಲಿಸಬಹುದು.
ನವೆಂಬರ 22, 2024 ರಂದು ಬೆಳಿಗ್ಗೆ 10 ರಿಂದ 1:30 ರವರೆಗೆ ಮತ್ತು ಮಧ್ಯಾಹ್ನ 2:30 ರಿಂದ 5 ರವರೆಗೆ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ, ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಾಗುವುದು. ದೂರುದಾರರು ನಿಗದಿತ ಸಮಯದಲ್ಲಿ ಹಾಜರಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಲೋಕಾಯುಕ್ತ ಧಾರವಾಡ ಜಿಲ್ಲಾ ಅಧೀಕ್ಷಕರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.