ಪಂ.ಮಧ್ವಾಚಾರ್ಯ ಜೋಶಿ ನಿಧನ ಮುಖಂಡರಿಂದ ಶೃದ್ಧಾಂಜಲಿ
ಪಂ.ಮಧ್ವಾಚಾರ್ಯ ಜೋಶಿ ನಿಧನ ಮುಖಂಡರಿಂದ ಶೃದ್ಧಾಂಜಲಿ
ಅಥಣಿ 26: ಉತ್ತಮ ಶಿಕ್ಷಕ, ಪ್ರಖಾಂಡ ಪಂಡಿತ, ಮಹಾ ಮೇಧಾವಿ ವೇದ ಮೂರ್ತಿ ಪಂ.ಮಧ್ವಾಚಾರ್ಯ ಜೋಶಿಯವರ ನಿಧನ ಕೇವಲ ಬ್ರಾಹ್ಮಣ ಸಮಾಜಕ್ಕಷ್ಟೇ ಅಲ್ಲ ಹಿಂದು ಧರ್ಮಕ್ಕೆ ತುಂಬಲಾರದ ಹಾನಿ ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಉಮೇಶರಾವ ಬಂಟೋಡಕರ ಹೇಳಿದರು. ಅವರು ಸ್ಥಳೀಯ ನರಸಿಂಹ ದೇವಸ್ಥಾನದಲ್ಲಿ ವೇ.ಮೂ.ಪಂ ಮಧ್ವಾಚಾರ್ಯ ಜೋಶಿಯವರ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ನಂತರ ಸುಮಾರು 35 ವರ್ಷಗಳ ಕಾಲ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು ಎಮ್.ಜಿ ಸರ್ ಇವರ ಆದರ್ಶವನ್ನು ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಅಳವಡಿಸಿಕೊಂಡು ಹೋಗುವುದೇ ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿಯಾಗಲಿದೆ ಎಂದರು. ಪಂ.ರಾಮಚಾರ್ಯ ಕಟಗೇರಿ ಮಾತನಾಡಿ, ಪಂ.ಮಧ್ವಾಚಾರ್ಯರು ಸತತ 35 ವರ್ಷಗಳ ವರೆಗೆ ಭಾಗವತದ ಮೇಲೆ ಪ್ರವಚನ ಹೇಳುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ ಅವರ ಜೀವನವೇ ನಮಗೆಲ್ಲ ಆದರ್ಶ ಎಂದರು.
ಪಂ ಜಯರಾಮಾಚಾರ್ಯ ಮದನಪಲ್ಲಿ ಮಾತನಾಡಿ, ಉತ್ತರಾಧಿ ಮಠದ ಸತ್ಯಪ್ರಮೋದ ತೀರ್ಥ ಮತ್ತು ಸತ್ಯಾತ್ಮ ತೀರ್ಥ ಮಹಾಸ್ವಾಮಿಗಳ ಶಿಷ್ಯರಾಗಿದ್ದ ಇವರು ತಮ್ಮ ಇಡೀ ಜೀವನವನ್ನೇ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ ಎಂದ ಅವರು ಮಧ್ವಾಚಾರ್ಯರು ಸತತ 35 ವರ್ಷಗಳ ಕಾಲ ಪಾಠ, ಪ್ರವಚನ ಮಾಡಿದ ಲಕ್ಷ್ಮೀ ನರಸಿಂಹ ದೇವಸ್ಥಾನ ಆವರಣದಲ್ಲಿರುವ ಸಭಾ ಭವನಕ್ಕೆ ಅವರ ಹೆಸರಿಡಿ ಎಂದು ಸಲಹೆ ನೀಡಿದರು.
ಧುರೀಣರಾದ ಪಂ.ಗುರುರಾಜ ಗುಡಿ, ಅರವಿಂದರಾವ ದೇಶಪಾಂಡೆ, ಪಂ. ಬಿಂದುಮಾಧವ ಜೋಶಿ, ನಾಗೇಶಾಚಾರ್ಯ ಅಯಾಚಿತ, ಶ್ರೀನಿವಾಸ ಜೋಶಿ, ಡಾ.ಪ್ರಮೋದ ಮೀರಜ, ಡಾ.ಅವಿನಾಶ ನಾಯಿಕ, ವೆಂಕಟೇಶ ದೇಶಪಾಂಡೆ ಸೇರಿದಂತೆ ಅನೇಕರು ಮಾತನಾಡಿ ಶೃದ್ಧಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಬ್ರಾಹ್ಮಣ ಸಮಾಜದ ಶ್ರೀರಾಮ ಕಟ್ಟಿ, ಡಾ.ವಿಜಯಕುಮಾರ ಚೈನಿ, ರಾಜು ಪಾಟೀಲ, ಸುಧೀಂದ್ರ ಬಾದರಾಯಣಿ, ಗುರುರಾಜ ಮಣ್ಣೂರ, ಎನ್.ಕೆ.ಪಾಟೀಲ, ವಾಸು ಜೋಶಿ ಸೇರಿದಂತೆ ವಿಪ್ರ ಸಮಾಜ ಬಂಧುಗಳು ಉಪಸ್ಥಿತರಿದ್ದರು.