ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಸಮಗ್ರ ಅಭಿವೃದ್ಧಿಗೆ ಒತ್ತಾಯ
ಮುಖ್ಯಾಂಶಗಳು
*111 ವರ್ಷ ಪೂರೈಸಿದ ಶಾಲೆ
*ತುರ್ತು ಬೇಡಿಕೆ ಈಡೇರಿಸಲು ಮನವಿ
*ಶಾಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹ
ಬೈಲಹೊಂಗಲ 04: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಸಮಗ್ರ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಸದಸ್ಯರು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಇಡೀ ರಾಜ್ಯದಲ್ಲಿ 111 ವರ್ಷ ಪೂರೈಸಿದ ನಾಲ್ಕಾರು ಪ್ರೌಢಶಾಲೆಗಳಲ್ಲಿ ಜಿಲ್ಲೆಯ ಸರದಾರ ಹೈಸ್ಕೂಲ್ ಮತ್ತು ಬೈಲಹೊಂಗಲದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ (ಎಂ.ಜೆ.ಹೈಸ್ಕೂಲ್) ಮಾತ್ರ ಇವೆ. 111 ವರ್ಷಗಳ ಇತಿಹಾಸದ ಐತಿಹಾಸಿಕ ಸ್ಮಾರಕವಾಗಿರುವ ರಾಯಣ್ಣ ಪ್ರೌಢಶಾಲೆ ಪಟ್ಟಣ, ಸುತ್ತಮುತ್ತಲಿನ ಗ್ರಾಮೀಣ ಭಾಗಗಳ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಬದುಕಿಗೆ ಬೆಳಕಾಗುವ ಮೂಲಕ ಈ ಭಾಗದಲ್ಲಿ ಅಚ್ಚುಮೆಚ್ಚಿನ ಶಾಲೆಯಾಗಿ ಹೊರಹೊಮ್ಮಿದೆ. ಶಾಲೆಯಲ್ಲಿ 400ಕ್ಕೂ ಹೆಚ್ಚು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಆ ಮಕ್ಕಳು ಒಳ್ಳೆಯ ವಿದ್ಯಾವಂತರಾದರೆ, ನಾಡಿನ ಬೆಳವಣಿಗೆಗೆ, ಪ್ರತಿ ಕುಟುಂಬದಲ್ಲಿ ವಿದ್ಯೆಯ ಪ್ರಸರಣವಾಗಿ ಮನೆತನಗಳು ಬೆಳೆದು ಬರಲು ಕಾರಣವಾಗಲಿದೆ. ಒಳ್ಳೆಯ ಶಿಕ್ಷಣ ನೀಡುತ್ತಿರುವ ಶಾಲೆಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದರು.
ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ ಮಾತನಾಡಿ, ಈ ಭಾಗದ ಐತಿಹಾಸಿಕ ಪ್ರೌಢಶಾಲೆಯ ಅಭಿವೃದ್ಧಿ ಆಗಬೇಕು ಎನ್ನುವುದು ಹಳೆಯ ವಿದ್ಯಾರ್ಥಿಗಳ ಹಾಗೂ ಪ್ರಜ್ಞಾವಂತ ಜನರ ಬಹುದಿನಗಳ ಬೇಡಿಕೆಯಾಗಿದೆ. ಶಾಲೆಗೆ ತುರ್ತಾಗಿ ಡಿಜಿಟಲ್ ಪ್ರೊಜೆಕ್ಟರ್, ಇನ್ವರ್ಟರ್ ಒದಗಿಸುವುದು, ಆಧುನಿಕ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಶಾಲೆ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ, ಹಿಂದುಳಿದ ಇಲಾಖೆಯಿಂದ ಮೆಟ್ರಿಕ್ ಪೂರ್ವ ಎಸ್.ಸಿ./ಎಸ್.ಟಿ. ಮತ್ತು ಇತರ ವರ್ಗಗಳ ಬಾಲಕಿಯರ 100 ಹಾಸಿಗೆಯ ವಸತಿ ನಿಲಯ, ಸುಸಜ್ಜಿತ ಗ್ರಂಥಾಲಯ, ಮುಖ್ಯ ಕಟ್ಟಡದ ಶಿಥಿಲ ಭಾಗ ಮರು ನಿರ್ಮಾಣ, ಹಂಚಿನ ಮೇಲೆ ಪ್ಲಾಸ್ಟಿಕ್ ಮೇಲ್ಛಾವಣಿ, ಮಳೆಗಾಲದಲ್ಲಿ ಸೋರದಂತೆ, ಪದೇಪದೇ ಹಂಚು ಒಡೆದು ಮಕ್ಕಳ ಮೇಲೆ ಬೀಳುವುದನ್ನು ತಡೆಯಬೇಕು. ರಾತ್ರಿ ವಾಚಮನ್ ನೇಮಿಸುವುದು, ಕಂಪ್ಯೂಟರ್ ಲ್ಯಾಬ್, ಸೋಲಾರ ವಿದ್ಯುತ್ ವ್ಯವಸ್ಥೆ, ಇನ್ವರ್ಟರ್, ಎಲ್ಲ ಹಳೆಯ ಕಟ್ಟಿಗೆ ಮತ್ತು ಕಬ್ಬಿಣದ ಡೆಸ್ಕ್ ಗಳನ್ನು ದುರಸ್ತಿ ಮಾಡಿಸುವುದು. ಬಣ್ಣ ಹಚ್ಚುವುದು. ಎಲ್ಲ ಕೋಣೆಗಳಲ್ಲಿ ಬಿರುಕು ಬಿಟ್ಟಿರುವ ಗೋಡೆಗಳ ದುರಸ್ತಿ ಮಾಡಿಸುವುದು. ಬಣ್ಣ ಹಚ್ಚುವುದು, ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಅಶೋಕ ರಾವುಳ, ಶ್ರೀಶೈಲ ಹಂಪಿಹೊಳಿ, ರವಿ ಹುಲಕುಂದ, ಶರೀಫ ನದಾಫ, ಪ್ರಕಾಶ ಬೆಳಗಾವಿ, ಯುನುಸ್ ಬಡೆಘರ ಇದ್ದರು.
**ಐತಿಹಾಸಿಕ ಹಿನ್ನಲೆ ಹೊಂದಿರುವ ಶಾಲೆಯ ಇತಿಹಾಸ ಗಮನಕ್ಕೆ ಬಂದಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
-ಪ್ರಭಾವತಿ ಫಕೀರಪೂರ,
ಉಪವಿಭಾಗಾಧಿಕಾರಿ