ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಕಾಲುವೆಗೆ ಜಮೀನುಗಳಲ್ಲಿ ಸ್ಥಳ ನೀಡಿದ ರೈತರ ಪ್ರತಿಭಟನೆ ಶೀಘ್ರದಲ್ಲಿಯೇ ಪರಿಹಾರ ಹಣ ಬಿಡುಗಡೆ ಮಾಡಲು ಶಾಸಕ ಶ್ರೀಮಂತ ಆದೇಶ
ವೆಂಕಟೇಶ ದೇಶಪಾಂಡೆ
ಅಥಣಿ 20: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗೆ ತಮ್ಮ ಜಮೀನುಗಳಲ್ಲಿ ಸ್ಥಳ ನೀಡಿದ ರೈತರು ಪರಿಹಾರ ಧನಕ್ಕಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಸಮಸ್ಯೆ ಕುರಿತು ಚರ್ಚಿಸಿ ಅವರ ಮನ ಒಲಿಸಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅತೀ ಶೀಘ್ರದಲ್ಲಿಯೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದರು.
ಕಾಗವಾಡ ಮತಕ್ಷೇತ್ರದ ಮೋಳೆ ಗ್ರಾಮದ ರೈತರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗಳ ನಿರ್ಮಾಣಕ್ಕೆ ತಮ್ಮ ತಮ್ಮ ಜಮೀನುಗಳಲ್ಲಿ ಸ್ಥಳ ನೀಡಿದ್ದಾರೆ ಆದರೆ ರೈತರಿಗೆ ಪರಿಹಾರ ಇಲ್ಲಿಯವರೆಗೂ ಸಿಕ್ಕಿರಲಿಲ್ಲ ಹೀಗಾಗಿ ಭಾನುವಾರ ಕೆಲ ರೈತರು ಕಾಲುವೆ ನಿರ್ಮಾಣಕ್ಕೆ ಅಡತಡೆ ಮಾಡಿದ್ದರು ಈ ಸುದ್ದಿ ತಿಳಿದ ತಕ್ಷಣ ಮೋಳೆ ಗ್ರಾಮದ ರೈತರನ್ನು ತಮ್ಮ ಕಛೇರಿಗೆ ಕರೆಯಿಸಿಕೊಂಡು ಶಾಸಕ ಶ್ರೀಮಂತ ಪಾಟೀಲ ರೈತರ ಎದುರೇ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ಧನ ವಿತರಿಸುವ ಕಾರ್ಯ ಅತೀ ಶೀಘ್ರದಲ್ಲಿ ಮಾಡಬೇಕು ಎಂದು ಆದೇಶಿಸಿದರು.
ತಮ್ಮ ಸಮಸ್ಯೆಗೆ ತಕ್ಷಣ ಸ್ಪಂದನೆ ನೀಡಿ ರೈತರ ಮಾತಿಗೆ ಮನ್ನಣೆ ಹಾಗೂ ಪರಿಹಾರ ಧನಕ್ಕಾಗಿ ಅಧಿಕಾರಿಗಳಿಗೆ ಆದೇಶಿಸಿರುವ ಶಾಸಕ ಶ್ರೀಮಂತ ಪಾಟೀಲರ ಮೇಲೆ ವಿಶ್ವಾಸ ಇಟ್ಟು ರೈತರು ತಮ್ಮ ಪ್ರತಿಭಟನೆಯನ್ನು ಹಿಂದೆ ಪಡೆದುಕೊಂಡು ಕಾಲುವೆ ಕಾಮಗಾರಿಗೆ ಅನವು ಮಾಡಿಕೊಡುವುದಾಗಿ ಘೋಷಿಸಿದರು.
ಶಾಸಕ ಶ್ರೀಮಂತ ಪಾಟೀಲರು ಮಾತನಾಡಿ ಈ ಯೋಜನೆ ಅನುಷ್ಠಾನಕ್ಕೆ ಹಗಲಿರಳು ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ತಾವೂ ಕೂಡ ಶ್ರಮಿಸುತ್ತಿದ್ದು ಕೆಲವೇ ದಿನಗಳಲ್ಲಿಯೇ ಈ ಯೋಜನೆಗೆ ಚಾಲನೆ ನೀಡಿ ರೈತರಿಗೆ ಬೇಸಿಗೆ ಅವಧಿಯಲ್ಲಿ ಕಾಲುವೆ ಮೂಲಕ ನೀರು ಕೊಡಬೇಕಾಗಿದೆ ಇದಕ್ಕಾಗಿ ನೀವೆಲ್ಲ ಸಹಕಾರ ನೀಡಬೇಕು ಎಂದ ಅವರು ಕಾಲವೆಗಳ ನಿರ್ಮಾಣಕ್ಕೆ ತಾವು ತಮ್ಮ ತಮ್ಮ ಜಮೀನುಗಳಲ್ಲಿ ಅವಕಾಶ ನೀಡಿರುವಿರಿ ಇದಕ್ಕಾಗಿ ತಮಗೆ ಪರಿಹಾರ ಧನ ಸಿಗಬೇಕು ಆದರೆ ಕೆಲ ತಾಂತ್ರಿಕ ಅಡಚಣೆಯಿಂದ ಪರಿಹಾರ ಧನ ಇಲ್ಲಿಯವರೆಗೂ ಬಿಡುಗಡೆ ಆಗಿಲ್ಲ ಈ ವಿಷಯ ನನ್ನ ಗಮನಕ್ಕೆ ಬಂದಿದೆ ಹೀಗಾಗಿ ಇಂದಿನಿಂದಲೇ ನಿಮಗೆ ಪರಿಹಾರ ಧನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಆದರೆ ಯಾರೊಬ್ಬರೂ ಕೂಡ ಕಾಮಗಾರಿಯನ್ನು ತಡೆಯಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.
ಸಭೆ ಸೇರಿದ್ದ ರೈತರೆಲ್ಲರು ಕೂಡಿ ನಾವು ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೇವೆ ಮತ್ತು ರೈತರಿಗೆ ನೀರು ಕೊಡಿಸಬೇಕು ಎನ್ನುವ ನಿಮ್ಮ ಈ ನಿಸ್ವಾರ್ಥ ಭಾವನೆಯನ್ನು ಗೌರವಿಸುತ್ತೇವೆ. ನಮಗೆ ಶೀರ್ಘರದಲ್ಲಿಯೇ ಪರಿಹಾರ ಧನ ಕೊಡಿಸಿಕೊಡಿ ಎಂದು ಮನವಿ ಮಾಡಿದರು