ಬೈಲಹೊಂಗಲ

ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ

ಸೇವಾದಳ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ

ಲೋಕದರ್ಶನ ವರದಿ

ಬೈಲಹೊಂಗಲ 05: ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಮೂಲಕ ಸದೃಢ ದೇಶ ನಿರ್ಮಾಣ ಮಾಡುವ ಕಾರ್ಯವನ್ನು ಭಾರತ ಸೇವಾದಳ ಮಾಡುತ್ತಿದೆ ಎಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು. 

ಪಟ್ಟಣದ ಶಾಸಕರ ಮತಕ್ಷೇತ್ರ ಮಾದರಿ ಶಾಲೆ ನಂ.4ರಲ್ಲಿ ಜಿ.ಪಂ.ಬೆಳಗಾವಿ, ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೈಲಹೊಂಗಲ ಇವರುಗಳ ಆಶ್ರಯದಲ್ಲಿ ಮಂಗಳವಾರ ನಡೆದ ಒಂದು ದಿನದ ಸೇವಾದಳ ಶಿಕ್ಷಕ-ಶಿಕ್ಷಕಿಯರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಮಕ್ಕಳ ಮೇಳ, ಮಕ್ಕಳ ನಾಯಕತ್ವ ಶಿಬಿರ, ಶಿಕ್ಷಕರಿಗೆ ಬ್ಯಾಂಡಸೆಟ್ ತರಬೇತಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಶಿಕ್ಷಣ ಜತೆಗೆ ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು. ದೇಶದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಪ್ರಾಥಮಿಕ ಹಂತದಲ್ಲೆ ನೈತಿಕ ಶಿಕ್ಷಣ, ಒಳ್ಳೆಯ ಸಂಸ್ಕೃತಿ-ಸಂಸ್ಕಾರ ಕಲಿಸಿದಾಗ ಮಾತ್ರ ಮುಂದೆ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂದರು. 

ಜಿಲ್ಲಾ ಸಂಚಾಲಕ ಎ.ಆರ್.ಪತ್ತಾರ, ಜಿಲ್ಲಾ ಸಮಿತಿ ಸದಸ್ಯ ಎಂ.ಎಂ.ಕೋಲಕಾರ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡಲಾಗುತ್ತಿದೆ. ಯುವಕರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವನೆಯನ್ನು ಮೂಡಿಸಲಾಗುತ್ತಿದೆ ಎಂದರು. 

ಸೇವಾದಳ ಶಿಕ್ಷಣದ ಮೂಲಕ ಜನರ ಆರೋಗ್ಯ ಮತ್ತು ಶಾರೀರಿಕ ದೃಢತೆಯನ್ನು ಬಲಗೊಳಿಸುವುದು. ಜಾತಿಯ ಮತ್ತು ವರ್ಣಿಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಿ ರಾಷ್ಟ್ರೀಯತೆಯನ್ನು ಹೆಚ್ಚಿಸುವುದು. ಆಪತ್ಕಾಲದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ಪ್ರಾಣ, ಮಾನ ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ, ಶಾಂತಿ ಕಾಯ್ದುಕೊಳ್ಳುವ ಕೆಲಸವನ್ನು ನಿರ್ವಹಿಸುವ ಜತೆಗೆ ನಾನಾ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದಾಗಿ ಹೇಳಿದರು. 

ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜಿ.ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಾಲೂಕಾಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಸಮಿತಿ ಸದಸ್ಯ ಬಿ.ಬಿ.ಬಸಕ್ರಿ, ಮುಖ್ಯಾಧ್ಯಾಪಕ ಸಿ.ಎಸ್.ಧರೆಪ್ಪನವರ, ವಿ.ಬಿ.ಕಂಬಾರ ಆಗಮಿಸಿದ್ದರು. ಬಸವರಾಜ ಜಕಾತಿ, ಮಲಗೌಡ ಪಾಟೀಲ, ಎಸ್.ಬಿ.ಖನಗೌಡ್ರ ಹಾಗೂ ಸೇವಾದಳದ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು. ಇದೇ ವೇಳೆ ನಿವೃತ್ತರಾದ ಪಟ್ಟಿಹಾಳ ಕೆ.ಬಿ.ಶಾಲೆಯ ದೈಹಿಕ ಶಿಕ್ಷಕ ವಿ.ಡಿ.ಕಮ್ಮಾರ, ಲಕ್ಕುಂಡಿಯ ಶಾಲೆಯ ಶಿಕ್ಷಕ ಅಶೋಕ ಗದಗ ಅವರನ್ನು ಸನ್ಮಾನಿಸಲಾಯಿತು. ವಿ.ಬಿ.ಕಮ್ಮಾರ ಸ್ವಾಗತಿಸಿದರು. ಶಾಖಾ ನಾಯಕ ವಿ.ಸಿ.ಅಡಕಿ ನಿರೂಪಿಸಿದರು. ಎಸ್.ಬಿ.ಮಲಗೌಡ್ರ ವಂದಿಸಿದರು.

ಸುದ್ದಿ ಓದಿ