ಜಾಹೀರಾತು ಫಲಕಗಳ ಬಾಡಿಗೆ ಮೊತ್ತ ಹೆಚ್ಚಿಸಿ: ಶಾಸಕ ಸವದಿ
ಅಥಣಿ 16: ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಡಾ.ಅಂಬೇಡ್ಕರ ವೃತ್ತದವರೆಗಿನ ಮತ್ತು ಶ್ರೀ ಶಿವಯೋಗಿ ವೃತ್ತದಿಂದ ಮರುಳ ಶಂಕರ ವೃತ್ತದವರೆಗೆ ಇತ್ತೀಚಿಗೆ ಅಳವಡಿಸಿರುವ ಜಾಹೀರಾತು ಫಲಕಗಳ ಬಾಡಿಗೆ ಮೊತ್ತ ಹೆಚ್ಚಿಸಿ ಇದಕ್ಕೆ ಒಪ್ಪದಿದ್ದಲ್ಲಿ ತೆರವುಗೊಳಿಸಿ ಎಂದು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಮುಖ್ಯಾಧಿಕಾರಿಗೆ ಸೂಚಿಸಿದರು.
ಅವರು ಪುರಸಭೆಯ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಹಿಂದಿನ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರು ರಸ್ತೆ ಮಧ್ಯದ ಡಿವೈಡರಗಳಲ್ಲಿ ಜಾಹೀರಾತು ಫಲಕ ಅಳವಡಿಸಿದಕ್ಕೆ ಪ್ರತಿಯಾಗಿ ಪುರಸಭೆಗೆ ಪ್ರತಿ ವರ್ಷ ಕೇವಲ 1.5 ಲಕ್ಷ ರೂ.ಗಳನ್ನು ಪಾವತಿಸುತಿಸಲಾಗುತ್ತಿದೆ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದರಿಂದ ಈ ಮೊತ್ತವನ್ನು ಸದಸ್ಯರೊಂದಿಗೆ ಚರ್ಚಿಸಿ ಬಾಡಿಗೆ ಮೊತ್ತವನ್ನು ಹೆಚ್ಚು ಮಾಡಿ ಇದಕ್ಕೆ ಒಪ್ಪದೇ ಹೋದಲ್ಲಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ಎಂದು ಸೂಚಿಸಿದ ಅವರು ಜಾಹೀರಾತು ಫಲಕಗಳನ್ನು ಅಳವಡಿಸಿದವರಿಗೆ ಪುರಸಭೆಯಿಂದಲೇ ವರ್ಷಕ್ಕೆ 1.5 ಲಕ್ಷ ಬಾಡಿಗೆ ಪಾವತಿಸಿ ಆ ಫಲಕಗಳನ್ನು ನಾವೇ ನಿರ್ವಹಣೆ ಮಾಡೋಣ ಎಂದು ಸಲಹೆ ನೀಡಿದರು.
ವಾಜಪೇಯಿ ವಸತಿ ಯೋಜನೆಯಡಿ ಪಟ್ಟಣದ ಹೊರ ವಲಯದ ಎಸ್.ಎಮ್.ಕೃಷ್ಣಾ ಬಡಾವಣೆ ಪಕ್ಕದ 10 ಎಕರೆ ಜಾಗದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಗೆ ಇಷ್ಟರಲ್ಲಿಯೇ ಚಾಲನೆ ನೀಡಲಾಗುವುದು ಎಂದರು. ಪಟ್ಟಣದ ಮಧ್ಯ ಭಾಗದಲ್ಲಿರುವ ಜೋಡು ಕೆರೆಗಳ ಮತ್ತು ಭಾಗೀರಥಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಸಚಿವ ಸಂಪುಟದ ಅನುಮೊದನೆ ಇಷ್ಟರಲ್ಲಿಯೇ ದೊರಕುವುದು ಎಂದ ಅವರು ಸಾರ್ವಜನಿಕರಿಗಾಗಿ ಮೀಸಲಿಟ್ಟ ಸ್ಥಳಗಳನ್ನು ಕಾನೂನು ಬದ್ಧವಾಗಿ ವಿವಿಧ ಸಮಾಜಗಳಿಗೆ ಮತ್ತು ಸಂಘ, ಸಂಸ್ಥೆಗಳಿಗೆ ಕೊಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಿ ಎಂದು ಸೂಚಿಸಿದರು. ಪುರಸಭೆಯ ವ್ಯಾಪ್ತಿಯಲ್ಲಿಯ ಸಾರ್ವಜನಿಕರಿಗೆ ಮೀಸಲಿಟ್ಟ ಸ್ಥಳಗಳನ್ನು ವಿವಿಧ ಸಮಾಜಗಳ ಸಮುದಾಯ ಭವನಗಳಿಗಾಗಿ ಕೊಡುವ ನಿರ್ಧಾರವನ್ನು ಪ್ರಸಕ್ತ ಸಭೆಯಲ್ಲಿ ಚರ್ಚಿಸದೇ ಶಾಸಕರ ಸೂಚನೆಯಂತೆ ಮುಂದಿನ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದ ಅವರು ಮುಂದಿನ ಸಭೆಯ ಒಳಗಾಗಿ ಪುರಸಭೆಯ ವ್ಯಾಪ್ತಿಯಲ್ಲಿ ಎಷ್ಟು ಸೈಟಗಳು ಖಾಲಿ ಉಳಿದುಕೊಂಡಿವೆ ಮತ್ತು ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಕುರಿತು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಕಸ ವಿಲೇವಾರಿ ಘಟಕದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಮಟ್ಟದ್ದಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ತಕ್ಷಣ ಪರೀಶೀಲಿಸಬೇಕು ಎಂದ ಅವರು ಧಾರ್ಮಿಕ ಹಿನ್ನಲೆಯುಳ್ಳ ಪಟ್ಟಣದ ಎಲ್ಲರ ಆರಾಧ್ಯ ದೈವ ಹನುಮಾನ ದೇವಸ್ಥಾನದ ಅಭಿವೃದ್ಧಿಗೆ ಹತ್ತು ಲಕ್ಷ ಅನುದಾನ ಕೊಡಬೇಕು ಎಂದು ಪುರಸಭಾ ಸದಸ್ಯ ಪ್ರಮೋದ ಬಿಳ್ಳೂರ ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದರು.
ಪುರಸಭಾ ಸದಸ್ಯೆ ಮೃಣಾಲಿನಿ ದೇಶಪಾಂಡೆ ಮಾತನಾಡಿ, ಭಾಜಿ ಮಾರುಕಟ್ಟಿಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು, ಸತತ ಮೂರು ಸಭೆಗಳಲ್ಲಿ ಅವ್ಯವಸ್ಥೆ ಸರಿ ಪಡಿಸಬೇಕು ಎಂದು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದಾಗ ತಕ್ಷಣ ಮಧ್ಯ ಪ್ರವೇಶಿಸಿದ ಶಾಸಕ ಲಕ್ಷ್ಮಣ ಸವದಿ, ಕಾಯಿ-ಪಲ್ಲೆ ಮಾರುಕಟ್ಟೆ ಒಂದೇ ಕಡೆ ಆಗಿರುವುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು, ತಕ್ಷಣ ಪಟ್ಟಣದ ಬೇರೆ ಬೇರೆ ಬಡಾವಣೆಗಳಲ್ಲಿ ಮಾರುಕಟ್ಟೆ ವಿಸ್ತರಿಸಿ ಎಂದು ಸಲಹೆ ನೀಡಿದರು. ಭಾಜಿ ಮಾರುಕಟ್ಟೆಯಲ್ಲಿ ಹೋಲಸೇಲ್ ಕಾಯಿ-ಪಲ್ಲೆ ಮಾರಾಟ ಮಾಡುತ್ತಿರುವ ಪರಿಣಾಮ ಅವ್ಯವಸ್ಥೆ ಆಗುತ್ತಿದ್ದು, ತಕ್ಷಣ ಹೋಲ್ ಸೇಲ್ ಮಾರಾಟಗಾರರನ್ನು ಸ್ಥಳಾಂತರಿಸಿ ಎಂದು ಪ್ರಮೋದ ಬಿಳ್ಳೂರ, ಉದಯ ಸೋಳಸಿ, ವೀಲೀನರಾಜ ಯಳಮಲ್ಲೆ ಆಗ್ರಹಿಸಿದರು. ಸಭೆಯಲ್ಲಿ ಅಂಗನವಾಡಿಗಳಿಗೆ ಸ್ಥಳ ನೀಡಬೇಕು ಎಂದು ರಾವಸಾಹೇಬ ಐಹೊಳೆ ಮತ್ತು ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸರಿ ಪಡಿಸಬೇಕು ಎಂದು ದತ್ತಾ ವಾಸ್ಟರ್, ರಾಜಶೇಖರ ಗುಡೋಡಗಿ, ರಿಯಾಜ ಸನದಿ, ಬಸವರಾಜ ನಾಯಕ, ಸಂತೋಷ ಸಾವಡಕರ, ಕಲ್ಲೇಶ ಮಡ್ಡಿ, ಮಲ್ಲಿಕಾರ್ಜುನ ಬುಟಾಳಿ, ಸೇರಿದಂತೆ ಅನೇಕ ಸದಸ್ಯರು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳಿ ವಹಿಸಿದ್ದರು, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಶಾಂತಾ ಲೋಣಾರೆ ಸೇರಿದಂತೆ ಪುರಸಭಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.