‘3000 ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ’
ಅಥಣಿ 03: ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ತತ್ವ ನಂಬಿದ ನಾನು ನನ್ನ ಅಧಿಕಾರವಧಿಯಲ್ಲಿ ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎನ್ನುವ ಭೇದ ಭಾವ ಇಲ್ಲದೆ ರೈತರ, ಬಡವರ, ನಿರ್ಗತಿಕರ, ರೈತರ ಸೇವೆ ಮಾಡಿರುವ ತೃಪ್ತಿ ನನಗಿದೆ ಎಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಹೇಳಿದರು. ಅವರು ಖಿಳೇಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಚುನಾವಣೆಯ ಈ ಸಂದರ್ಭದಲ್ಲಿ ಎಲ್ಲ ಅಭ್ಯರ್ಥಿಗಳು ಚುನಾವಣೆ ಪ್ರಚಾರದಲ್ಲಿ ತೊಡಗಿರುವಾಗ ನಾನು ಈ ಪ್ರಚಾರ ಕೆಲಸಕ್ಕೆ ಮಹತ್ವ ಕೊಡದೆ ಕೃಷ್ಣಾ ನದಿಗೆ ನೀರು ಹರಿಸಲು ಇಂಡಿಗೆ ತೆರಳಿ ದೇವೇಂದ್ರ ಫಡ್ನವೀಸ್ ಇವರನ್ನು ಭೇಟಿ ಮಾಡಿ ನೀರು ಬಿಡಲು ಆಗ್ರಹಿಸಿದ್ದೆ ಇದರ ಪರಿಣಾಮ ಮಹಾರಾಷ್ಟ್ರ ಸರಕಾರ 3 ಟಿ.ಎಮ್.ಸಿ ನೀರು ಬಿಡುಗಡೆ ಮಾಡಿದ್ದಾರೆ ಎಂದ ಅವರು ನಾನು ಶಾಸಕನಾಗಿರುವುದು ಜನರ, ರೈತರ ಸೇವೆ ಮಾಡಲು ಹೊರತು ರಾಜಕೀಯ ಕೆಲಸ ಅಥವಾ ಪ್ರತಿಷ್ಠೆಗಲ್ಲ ಎಂದರು.
ನಾನು ನನ್ನ 5 ವರ್ಷಗಳ ಅವಧಿಯಲ್ಲಿ ಕಾಗವಾಡ ಮತಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ, ರಸ್ತೆ, ವಿದ್ಯುತ್, ಕೃಷಿ, ಶಿಕ್ಷಣ, ತೋಟಗಾರಿಕೆ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳ ಮೂಲಕ 3000 ಕೋಟಿಗೂ ಹೆಚ್ಚು ಅನುದಾನದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಗಳನ್ನು ಅನುಷ್ಠಾನ ಗೊಳಿಸಿರುವೆ ಎಂದ ಅವರು ಕಳೆದ 60 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಯಾಗದ ತೋಟದ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಿರುವೆ ಎಂದರು.
ಗ್ರಾಮೀಣ ಭಾಗದ ರೈತರ, ರೈತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳಲ್ಲಿ ಕೊರತೆ ಇರುವ ಕೊಠಡಿಗಳನ್ನು, ಪ್ರತಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ, ಶುದ್ಧ ಕುಡಿಯುವ ನೀರು ಈ ರೀತಿ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವೆ ಎಂದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದಂತೆ ಈಗ ನಮ್ಮ ಜೊತೆ ಇಲ್ಲ ಆದರೆ ಮೊದಲು ನಮ್ಮ ಜೊತೆಗಿದ್ದವರು ಸಾಕಷ್ಟು ಪ್ರಯತ್ನ ನಡೆಸಿದ್ದರು ಆದರೂ ಕೂಡ ಸತತ ಪ್ರಯತ್ನದ ಫಲವಾಗಿ ಈ ಯೋಜನೆ ಪೂರ್ಣಗೊಂಡಿದೆ ಎಂದರು.
ಬಿಜೆಪಿಗೆ ಮತ ನೀಡದಂತೆ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಮೂಲಕ ಆಡಳಿತ ಮಂಡಳಿಗಳಿಗೆ ಪತ್ತು ಕೊಡುವುದಿಲ್ಲ ಎಂದು ಕೆಲ ದುಷ್ಟ ಶಕ್ತಿಗಳು ಬೆದರಿಕೆ ಹಾಕುತ್ತಿದ್ದು, ಇದಕ್ಕೆ ಪ್ರತಿಯಾಗಿ ಚುನಾವಣೆ ನಂತರ ಪ್ರತ್ಯೇಕ ಪತ್ತಿನ ಸಂಘ ಪ್ರಾರಂಭಿಸಲು ಕ್ರಮ ಕೈಗೊಳ್ಳುವೆ ಜೊತೆಗೆ ಆರ್ಥಿಕ ವ್ಯವಹಾರಕ್ಕೂ ಕೂಡ ನಾನು ಆರ್ಥಿಕ ಸಹಾಯ ಮಾಡುತ್ತೇನೆ ಎಂದ ಅವರು ಕಾಗವಾಡ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಗುರಿ ತಮ್ಮದಾಗಿದೆ ಎಂದರು.
ಖಿಳೇಗಾಂವ ಗ್ರಾಮದ ಧರೆಪ್ಪ ಹೊನ್ನಾಗೋಳ, ಸತೀಶ್ ಹೊನ್ನಾಗೋಳ, ರವಿ ನಾಗೋಳ, ಆಜೂರ ಗ್ರಾಮದ ಶಂಕರ ದೊಡ್ಡಣ್ಣವರ, ಪಾಂಡೇಗಾಂವ ಗ್ರಾಮದ ಪ್ರಶಾಂತ ಕೋಳಿ, ಉದಯ ಪಾಟೀಲ, ಕಲಾಂ ಮುಜಾವರ, ಮಹಾದೇವ ಪಾಟೀಲ, ಸುಶಾಂತ ಪಾಟೀಲ, ಶಿವಾನಂದ ಸುತಾರ, ಅಶೋಕ ಪೂಜಾರಿ, ಸತೀಶ ಪೂಜಾರಿ, ಸಂದೀಪ ಪಾಟೀಲ, ಸೂರ್ಯಕಾಂತ ಮಾಣಿಕ ಪಾಟೀಲ, ರಾಹುಲ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಶ್ರೀಮಂತ ಪಾಟೀಲ ಕಾಗವಾಡ ಮತಕ್ಷೇತ್ರದ ಗುಂಡೇವಾಡಿ, ಬಳ್ಳಿಗೇರಿ, ಮಲಾಬಾದ ಗ್ರಾಮಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ನೂರಾರು ಧುರೀಣರನ್ನು ಬಿಜೆಪಿಗೆ ಬರಮಾಡಿಕೊಂಡರು.