ಬೈಲಹೊಂಗಲ

ಮಣ್ಣು ಆರೋಗ್ಯ ಕಾರ್ಡ ವಿತರಣೆ

ಮಣ್ಣು ಆರೋಗ್ಯ ಕಾರ್ಡ ವಿತರಣೆ

ಬೈಲಹೊಂಗಲ27 : ತಾಲೂಕಿನ ಬೇವಿನಕೊಪ್ಪ ಗ್ರಾಮದ ವಿಠ್ಠಲ್ ರುಕ್ಮಿಣಿ ದೇವಸ್ಥಾನದಲ್ಲಿ  ಗ್ರಾಮದ ರೈತರಿಗೆ " ಮಣ್ಣು ಆರೋಗ್ಯ ಕಾರ್ಡ ವಿತರಣೆ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ (Soil Science) ವಿಜ್ಞಾನಿಗಳಾದ ಎಸ್ ಎಮ್ ವಾರದ  ಹಾಗೂ ರಿಲಾಯನ್ಸ್ ಫೌಂಡೇಷನ್ ವ್ಯವಸ್ಥಾಪಕ ತೋಷ ವರಕ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂತೋಷ ವರಕ್ ರಿಲಾಯನ್ಸ್ ಫೌಂಡೇಷನ್ ವತಿಯಿಂದ ಎಪ್ರಿಲ್ 28 ರಂದು ಬೇವಿನಕೊಪ್ಪ ಗ್ರಾಮದ ರೈತರಿಗೆ "ಮಣ್ಣಿನ ಮಾದರಿ ತೆಗೆಯುವ ವಿಧಾನ ಹಾಗೂ ಮಣ್ಣಿನ ಪರೀಕ್ಷೆಯ ಮಹತ್ವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

 ಅದರ ಭಾಗವಾಗಿ ಅಗತ್ಯವಿರುವ ರೈತಬಾಂಧವರಿಂದ ಮಣ್ಣಿನ ಮಾದರಿ‌ ಸಂಗ್ರಹಿಸಿ ಪರೀಕ್ಷೆಗೆ ಕೋಲಾರಕ್ಕೆ ಕಳುಹಿಸಿ ಅದರ ಫಲಿತಾಂಶದ ಜೊತೆಗೆ ಮಣ್ಣು ಆರೋಗ್ಯ ಕಾರ್ಡ ಅನ್ನು ರೈತಬಾಂಧವರಿಗೆ ಯಾವುದೇ ವೆಚ್ಚವಿಲ್ಲದೇ ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ. ಮನುಷ್ಯನಿಗೆ ಆರೋಗ್ಯ ಹೇಗೆ ಮುಖ್ಯವೋ ಹಾಗೇಯೆ ಮಣ್ಣಿಗೂ ಆರೋಗ್ಯ ಮುಖ್ಯವಾಗಿರುತ್ತದೆ. ಮಣ್ಣಿನ ಪರೀಕ್ಷೆ ಮಾಡಿಸುವುದರಿಂದ ಮಣ್ಣಿನಲ್ಲಿ ಏನು ಕೊರತೆ ಇದೆ ಎಂಬುದನ್ನು ಕಂಡುಕೊಂಡು ಅದಕ್ಕೆ ಬೇಕಾದ ಪೋಷಕಾಂಶ ಹಾಗೂ ರಸಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ಪೂರೈಕೆ ಮಾಡಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು. ಮಣ್ಣಿನ ಗುಣಮಟ್ಟ ಮತ್ತು ರೈತರ ಲಾಭದಾಯಕತೆಯನ್ನು ಸುಧಾರಿಸುವುದು  ರಿಲಯನ್ಸ ಫೌಂಡೇಷನ್ ಉದ್ದೇಶವಾಗಿದೆ ಎಂದು ಹೇಳಿದರು.

ಮಣ್ಣು ಪರೀಕ್ಷೆಯ ಬಗ್ಗೆ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ  ಎಸ್ ಎಮ್ ವಾರದ ಮಾತನಾಡಿ ರೈತ ತನ್ನ ಕೃಷಿ ಭೂಮಿಯಲ್ಲಿ ಯಾವ ವಿಧದ ಮಣ್ಣಿದೆ, ಅದಕ್ಕೆ ಹೊಂದುವ ಬೆಳೆ ಯಾವುದೆಂದು ಕಂಡುಕೊಳ್ಳದೆ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರುವುದಿಲ್ಲ. ಅಲ್ಲದೆ, ಅದು ಸಮಯ, ಹಣ ಮತ್ತು ಶ್ರಮದ ವ್ಯರ್ಥಕ್ಕೆ ಕಾರಣವಾಗುತ್ತದೆ.ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯಡಿ ರೈತರಿಗೆ ಪ್ರತಿ ಹಿಡುವಳಿ ಭೂಮಿ ಅಥವಾ ಕೃಷಿ ಭೂಮಿಯ ಮಣ್ಣಿನ ಪರೀಕ್ಷಾ ವರದಿಯನ್ನು ನೀಡಲಾಗುತ್ತದೆ. ಇದರಲ್ಲಿ 12 ಪಾಯಿಂಟ್ಸ್‌ಗಳ (ಅಂದರೆ pH, EC, ಸಾವಯವ ಕಾರ್ಬನ್, ಸಾರಜನಕ, ಫಾಸ್ಫೇಟ್, ಪೊಟ್ಯಾಷ್, ಸಲ್ಫರ್, ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಬೋರಾನ್) ಪರೀಕ್ಷೆ ನಂತರವೇ ರೈತರಿಗೆ ಉಚಿತ ಮಣ್ಣಿನ ಆರೋಗ್ಯ ಕಾರ್ಡ್‌ ನೀಡಲಾಗುತ್ತದೆ. ಸಾವಯವ ಗೊಬ್ಬರವನ್ನು ಹೆಚ್ಚಿನ‌ ಪ್ರಮಾಣದಲ್ಲಿ ಬಳಸುವದರಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಬಹುದು ಎಂದು ಹೇಳಿದರು.ಮಣ್ಣು ಪರೀಕ್ಷೆ‌ ಮಾಡಿಸಿಕೊಂಡ ಸುಮಾರು 50 ರೈತರಿಗೆ ಮಣ್ಣು ಆರೋಗ್ಯ ಕಾರ್ಡ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಸಂತೋಷ ಹಿರೇಮಠ, ಪ್ರಕಾಶ್ ಮಾಟೊಳ್ಳಿ,  ಕೆಂಚಪ್ಪ ಕಡಬಿ, ಶಿವಾನಂದ ಚವತ್ರಿಮಠ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

ಸುದ್ದಿ ಓದಿ