ಮೂಲ ಸಂಸ್ಕೃತಿ ಪರಂಪರೆ ಜಾತ್ರೆ ಉತ್ಸವ ಮರೆಮಾಚುತ್ತಿವೆ : ಡಾ.ಚನ್ನಬಸವ ಶ್ರೀ
ಲೋಕದರ್ಶನ ವರದಿ,
ಜಮಖಂಡಿ: 24: ಜಾಗತೀಕರಣ, ಔದ್ಯೋಗಿಕರಣ, ಉದಾರಿಕರಣ ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿ ಪರಂಪರೆ ಜಾತ್ರೆ ಉತ್ಸವ ಮರೆಮಾಚುತ್ತಿವೆ. ಇದರಿಂದ ಸಂಬಂಧಗಳು ದೂರಾಗುತ್ತಿವೆ ಎಂದು ಓಲೇಮಠದ ಡಾ.ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ನಗರದ ಮುಧೋಳ ರಸ್ತೆಯ ಹೊರವಲಯದ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎ.ಪಿ.ಎಂ.ಸಿ) ಆಶ್ರಯದಲ್ಲಿ ನಡೆದ ಬಸವೇಶ್ವರ ಅಮರಾಯಿ ಜಾನುವಾರುಗಳ ಜಾತ್ರಾ ಪ್ರಾರಂಭೋತ್ಸವ ಹಾಗೂ ವಿವಿಧ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಕರ್ಾರಗಳು ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿವಿಧ ಯೋಜನೆ ಅನುದಾನ ಕೊಡುವುದರ ಜೊತೆಗೆ ಕೃಷಿಗೆ ಹೆಚ್ಚು ಪ್ರೋತ್ಸಾಹ ದೊರೆಯುವಂತೆ ಜಾಗೃತಿ ಅರಿವು ಕಾರ್ಯಕ್ರಮಗಳು ಮೂಡಿಬರಬೇಕು ಎಂದರು.
ಕೃಷಿಯನ್ನು ಆರ್ಥಿಕ ಭದ್ರತೆಗಾಗಿ ಉಪಯೋಗಿಸಬೇಕು. ರೈತರು ಕೃಷಿಯಲ್ಲಿ ಹೊಸತನವನ್ನು ಕಲಿತು ಉತ್ತಮ ಬದುಕು ಸಾಗಿಸುವಂತವರಾಗಬೇಕು. ಜನ ಜಾನುವಾರುಗಳಿಗೆ ಉಪಯೋಗವಾಗುವಂತೆ ಕೃಷಿ ಪದ್ದಿತಿಗಳನ್ನು ಅಳವಡಿಸಿಕೊಳ್ಳಬೇಕು. ರೈತರ ಬೆನ್ನೆಲುಬಾದ ಜಾನುವಾರುಗಳ ರಕ್ಷಣೆ ಮತ್ತು ಅವುಗಳ ಪೋಷಣೆಗೆ ಹೆಚ್ಚು ಒತ್ತುಕೊಡಬೇಕು ಎಂದರು.
ಶಾಸಕ ಆನಂದ ನ್ಯಾಮಗೌಡ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ ರೈತರು ಇಳುವರಿ ಹೆಚ್ಚಾಗುವ ದೃಷ್ಠಿಯಿಂದ ಬೆಳೆಗಳಿಗೆ ಮತ್ತು ಪದಾರ್ಥಗಳಿಗೆ ರಾಸಾಯನಿಕ ಸಿಂಪಡಿಸುವುದರಿಂದ ಆರೋಗ್ಯಕ್ಕೆ ಹಾನಿಕರ ಉಂಟಾಗುತ್ತಿದೆ. ಸಾವಯವ ಕೃಷಿ ಪದ್ದತಿಗೆ ರೈತರು ಹೆಚ್ಚಿನ ಆಸಕ್ತಿ ತೋರಬೇಕು. ಫಲವತ್ತಾದ ಭೂಮಿಯ ಉಳಿವಿಗಾಗಿ ಮಿತವಾಗಿ ನೀರು ಬಳಕೆ ಮಾಡಬೇಕು. ರೈತರು ಬೆಳೆಯುವ ಪ್ರತಿಯೊಂದು ಬೆಳೆಗೆ ವಿಮೆ ಹೊಂದಬೇಕು. ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎಂದರು.
ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಕೃಷಿಗೆ ಹೆಚ್ಚು ಒತ್ತು ಕೊಟ್ಟು ಸಾವಯವ ಕೃಷಿ ಪದಾರ್ಥಗಳನ್ನು ಉತ್ಪಾದನೆ ಮಾಡುವಲ್ಲಿ ಆಸಕ್ತಿ ತೋರಬೇಕು. ಭೂಮಿ ಮತ್ತು ಜಾನುವಾರುಗಳಿಗೆ ಪೂರಕವಾಗುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಜಾನುವಾರಗಳ ಸಂರಕ್ಷಣೆಯಾಗಬೇಕು ಮತ್ತು ಜನಸಂಖ್ಯೆ ನಿಯಂತ್ರಣವಾಗಬೇಕು ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ ಇಂದಿನ ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕು. ರೈತ ಸೈನಿಕ ನಮ್ಮ ದೇಶದ ಎರಡು ಕಣ್ಣು. ರೈತರಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಭೂಮಿ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಭೂಮಿಯ ಫಲವತ್ತತೆಗಾಗಿ ಮಿಶ್ರ ಬೆಳೆಗಳನ್ನು ಬೆಳೆಯಬೇಕು. ರಾಸಾಯನಿಕ ಔಷಧಿಗಳನ್ನು ಬಳಸಬಾರದು ಎಂದರು.
ವೇದಿಕೆಯಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಹುಸೇನಸಾಬ ಬಾಗವಾನ, ಉಪಾಧ್ಯಕ್ಷ ಬಸವರಾಜ ಹಂಗರಗಿ, ಮುಖಂಡರಾದ ನಿಂಗಪ್ಪ ಕಡಪಟ್ಟಿ, ಈಶ್ವರ ಕರಬಸನವರ, ಫಕೀರಸಾಬ ಬಾಗವಾನ, ಎಪಿಎಂಸಿ ಕಾರ್ಯದರ್ಶಿ ಶಿವಾನಂದ ಕುಂಬಾರ ಇದ್ದರು. ಸಿದ್ರಾಮ ಜಂಬಗಿ, ಶಿವರಾಯ ಚಿಕ್ಕೋಣ, ಎನ್.ಆರ್.ನ್ಯಾಮಗೌಡ, ಶ್ರೀಶೈಲ ಚಿಟಗೌಡರ, ನಂದೆಪ್ಪ ನ್ಯಾಮಗೌಡ, ಚನ್ನಮಲ್ಲಪ್ಪ ತೆಲಬಕ್ಕನವರ, ಸದಾಶಿವ ಕವಟಗಿ, ಎ.ಆರ್.ರಾಮಗೊಂಡ ಇತರರು ಇದ್ದರು. ಮಲ್ಲೇಶಿ ಹೇಸಮನಿ ಸ್ವಾಗತಿಸಿ ನಿರೂಪಿಸಿದರು. ಕೆ.ಕೆ.ತುಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು.