ವಿಶ್ವ ಪೈಲ್ಸ್ ಜಾಗೃತಿ ದಿನ : ಮೇಡ್ ಸ್ಕ್ವೇರ್ ಆಸ್ಪತ್ರೆಯಲ್ಲಿ ಉಚಿತ ಮೂಲವ್ಯಾಧಿ ತಪಾಸಣೆ
ಕಾರವಾರ 17 : ವಿಶ್ವ ಪೈಲ್ಸ್ ಜಾಗೃತಿ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಮೂಲವ್ಯಾಧಿ ಹಾಗೂ ಗುದಸಂಬಂಧಿ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೇಡ್ ಸ್ಕ್ವೇರ್ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರವು ನ.20ರಂದು ಉಚಿತ ತಪಾಸಣೆ, ಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆಯುರ್ವೇದಿಕ್ ಆಸ್ಪತ್ರೆಯ ವೈದ್ಯೆ ಡಾ. ಲಲಿತಾ ಶೆಟ್ಟಿ ತಿಳಿಸಿದರು. ಕಾರವಾರದ ಪತ್ರಿಕಾಭವನದಲ್ಲಿ ಮಂಗಳವಾರ ಮಾತನಾಡಿದ ಮೇಡ್ ಸ್ಕ್ವೇರ್ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯೆ ಮೂಲವ್ಯಾಧಿ ಸೇರಿದಂತೆ ಗುದಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಾಗಿವೆ.
ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಮನುಷ್ಯನ ಜೀವಿತಾವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಂದಲ್ಲೊಂದು ರೀತಿಯ ಗುದಸಂಬಂಧಿ ಕಾಯಿಲೆಗಳಿಂದ ಬಳಲುವ ಸಾಧ್ಯತೆಯಿದೆ. ಅದರಲ್ಲೂ ಮೂಲವ್ಯಾಧಿ ಸಮಸ್ಯೆ ಹಲವರನ್ನು ಕಾಡುತ್ತಿದೆ. ಆದರೆ ಮುಜುಗರ ಅಥವಾ ನಿರ್ಲಕ್ಷ್ಯದಿಂದಾಗಿ ಅನೇಕರು ಆರಂಭಿಕ ಹಂತದಲ್ಲಿಯೇ ವೈದ್ಯಕೀಯ ಸಲಹೆ ಪಡೆಯಲು ಹಿಂದೇಟು ಹಾಕುತ್ತಾರೆ.
ಇದರಿಂದ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದ್ದು, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಲಲಿತಾ ಶೆಟ್ಟಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ.20ರ ಶುಕ್ರವಾರದಂದು ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ತಪಾಸಣೆ, ವೈದ್ಯಕೀಯ ಸಮಾಲೋಚನೆ, ಚಿಕಿತ್ಸೆ ಮತ್ತು ಓಷಧ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯ ಸಮಸ್ಯೆಗಳ ಕುರಿತು ಸೂಕ್ತ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಲಲಿತಾ ಮನವಿ ಮಾಡಿದರು. ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ನ.20 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ನಗರದ ಮುರಳೀಧರ ರಸ್ತೆಯ ಬ್ರಹ್ಮದೇವ ದೇವಸ್ಥಾನದ ಎದುರಿನ ಮೆಡ್ ಸ್ಕ್ವೇರ್ ಆಯುರ್ವೇದ್ ಚಿಕಿತ್ಸಾ ಕೇಂದ್ರದಲ್ಲಿ ಶಿಬಿರ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಡಾ. ಸಿದ್ದಾಂತ ಮಡ್ಕೇಕರ್ ತಿಳಿಸಿದರು.