ವಿವಿಧ ಸಂಘ-ಸಂಸ್ಥೆಗಳಿಂದ ವಿಶ್ವ ಆರೋಗ್ಯ ದಿನಾಚರಣೆ
ಲೋಕದರ್ಶನ ವರದಿ,
ಜಮಖಂಡಿ08: ವೈರಸ್ಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ ಎಂಬ ವೈದ್ಯಕೀಯ ಕ್ಷೇತ್ರದ ವಿಜ್ಞಾನಿಗಳ ಊಹೆ ಸತ್ಯವಾಗುತ್ತಿದೆ. ಬೇರೆ ಬೇರೆ ವೈರಸ್ಗಳು ಹರಡಿ ಜನರ ಆರೋಗ್ಯ ಕೆಡಿಸುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಮಖಂಡಿ ಘಟಕದ ಅಧ್ಯಕ್ಷ ಡಾ.ಎಚ್.ಜಿ. ದಡ್ಡಿ ಕಳವಳ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಶಾಖೆ, ಆರೋಗ್ಯ ಇಲಾಖೆ, ಪ್ಯಾರಾಮೆಡಿಕಲ್ ಸಂಸ್ಥೆ, ನರ್ಸಿಂಗ್ ಕಾಲೇಜು, ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ಬಸವ ಭವನದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅನಾರೋಗ್ಯಕರ ಜೀವನಶೈಲಿಯಿಂದಾಗಿ ಇನ್ನಷ್ಟು ರೋಗಗಳು ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗ ಮತ್ತೆ ಹೆಚ್ಚಾಗುತ್ತಿದೆ. ಆದರೆ, ಜನತೆ ಆ ರೋಗದ ಕುರಿತು ಗಂಭೀರತೆಯನ್ನು ಕಳೆದುಕೊಂಡಿದೆ. ಹಾಗೆಯೇ ಸರ್ಕಾರ ಕೂಡ ಗಂಭೀರತೆಯನ್ನು ಉಳಿಸಿಕೊಂಡಿಲ್ಲ ಎಂದು ವಿಷಾದಿಸಿದರಲ್ಲದೆ ಜಾಗೃತಿ ವಹಿಸಬೇಕು ಎಂದು ಎಚ್ಚರಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ನಿಯಮಗಳನ್ನು ರೂಪಿಸಿ ಘೋಷಿಸುತ್ತದೆ. ಎಲ್ಲ ನಿಯಮಗಳು ಮತ್ತು ಘೋಷಣೆಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗುತ್ತಿವೆ. ಸಾರ್ವಜನಿಕರ ಸಹಕಾರವಿಲ್ಲದೆ ಹಾಗೂ ಸರ್ಕಾರದ ಕಟ್ಟುನಿಟ್ಟಿನ ಕ್ರಮವಿಲ್ಲದೆ ಯಾವುದೇ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಈಗಲಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಾ ಬಣ್ಣದ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಒಂದು ಘೋಷವಾಕ್ಯವನ್ನು ಘೋಷಣೆ ಮಾಡುತ್ತದೆ. ಎಲ್ಲರಿಗೂ ಆರೋಗ್ಯ ಎಂಬುದು ಈ ಸಲದ ಘೋಷವಾಕ್ಯವಾಗಿದೆ. ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಕಚೇರಿ ಇಂದಿನ ದಿನವನ್ನು ಸಮರ್ಪಣ ದಿನವನ್ನಾಗಿ ಆಚರಿಸಲು ಸೂಚಿಸಿದೆ ಎಂದರು.
ಡಾ.ವಿ.ಎಸ್. ಬಿರಾದಾರ, ಡಾ.ಎ.ಆರ್. ದೇವರಡ್ಡಿ ಮತ್ತಿತರರು ಇದ್ದರು. ಅತ್ಯುತ್ತಮ ಸೇವೆ ಸಲ್ಲಿಸಿದ ಬಿ.ಎಸ್. ಕಲ್ಯಾಣಿ, ವಿರೂಪಾಕ್ಷಿ (ಸರ್ಕಾರಿ ಆಸ್ಪತ್ರೆ ಸಿಬ್ಬಂದಿ), ಬಸಯ್ಯ ಮಠ, ವಾಸಂತಿ, ರಮ್ಯಾ (ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ) ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂ.ಎಚ್. ಕಡ್ಲಿಮಟ್ಟಿ ನಿರೂಪಿಸಿ, ವಂದಿಸಿದರು.
ಇದಕ್ಕೂ ಮೊದಲು ನಗರದ ಎ.ಜಿ. ದೇಸಾಯಿ ವೃತ್ತದಿಂದ ಜನಜಾಗೃತಿ ಜಾಥಾ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವ ಭವನಕ್ಕೆ ಬರಲಾಗಿತ್ತು.