ಜಮಖಂಡಿ

ದುಡಿಮೆ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಮಹಾಲಿಂಗಶ್ರೀ

ದುಡಿಮೆ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಮಹಾಲಿಂಗಶ್ರೀ

ಜಮಖಂಡಿ 27:  ದುಡಿಮೆ ಮನುಷ್ಯನಿಗೆ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಕಾಯಕ ನಿಷ್ಠೆ ಬದುಕನ್ನು ಸಮತೋಲನದಲ್ಲಿ ಇಡುತ್ತದೆ. ದಾಸೋಹ ಮಾಡುವ ಅವಕಾಶ ಕಾಯಕದಿಂದಲೇ ಲಭಿಸುತ್ತದೆ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.  

ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ತಿಂಗಳ ನಾಲ್ಕನೇ ಭಾನುವಾರದ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಕಾರ್ಯಕ್ರಮ ‘ಶ್ರೀಗುರುದೇವ ಸತ್ಸಂಗ’ದ ಸಾನ್ನಿಧ್ಯ ವಹಿಸಿ ಅವರು ‘ಕಾಯಕ ಮತ್ತು ದಾಸೋಹ’ ಕುರಿತು ಅನುಭಾವ ಹಂಚಿಕೊಂಡರು.  

ಸಂಪತ್ತು ಒಂದೆಡೆ ಕೇಂದ್ರೀಕೃತವಾದರೆ ಸಮಾಜದಲ್ಲಿ ಎಲ್ಲ ಬಗೆಯ ಅಸಮಾನತೆ ಹುಟ್ಟುತ್ತವೆ. ಕಾಯಕ ಸಾರ್ಥಕವಾಗುವುದೇ ದಾಸೋಹದಿಂದ. ಸಮಸಮಾಜ ನಿರ್ಮಾಣಕ್ಕೆ ದಾಸೋಹ ಅಗತ್ಯ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳು ಎಂದರು.  

ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ದೇವರು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಷ್ಯನ ಆಧ್ಯಾತ್ಮಿಕ ಸಾಧನೆಗೆ ಗುರುಗಳ ಕರುಣೆ ಅಗತ್ಯ, ಗುರುಗಳ ಕರುಣೆಯಿಂದ ಶಿಷ್ಯನ ಅಜ್ಞಾನ ದೂರವಾಗುತ್ತದೆ ಎಂದು ಆಶೀರ್ವಚನ ನೀಡಿದರು.  

ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ತನ್ನ ಬಗ್ಗೆ ತನಗೆ ಅರಿವು ಉಂಟು ಮಾಡಿಕೊಳ್ಳುವುದನ್ನು ಅನುಭಾವ ಎನ್ನಲಾಗುತ್ತದೆ ಎಂದು ಆಶೀರ್ವಚನ ನೀಡಿದರು.  

ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ರಾಮಚಂದ್ರ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ಮುತ್ತು ಗೆದ್ದೆಪ್ಪನವರ ಸ್ವಾಗತಿಸಿ, ನಿರೂಪಿಸಿದರು.  

11 ದಿನ ಮೌನಾನುಷ್ಠಾನ: ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ತಮ್ಮ ವೈಯಕ್ತಿಕ ಸಾಧನೆಗಾಗಿ ಕೈಗೊಂಡಿದ್ದ 11 ದಿನಗಳ ಮೌನಾನುಷ್ಠಾನವನ್ನು ಇದೇ ಸದರ್ಭದಲ್ಲಿ ಅಂತ್ಯಗೊಳಿಸಿದರು. ಮೌನಾನುಷ್ಠಾನದಿಂದ ಮನಃಶಾಂತಿ ಲಭಿಸುತ್ತದೆ. ಭಕ್ತಾದಿಗಳಲ್ಲಿ ಭಕ್ತಿಭಾವ ತುಂಬುತ್ತದೆ ಎಂದು ಹರ್ಷಾನಂದ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 


ಸುದ್ದಿ ಓದಿ