ಅಭಿಪ್ರಾಯ

ಸಾವಿಗೆ ಯಾವ ಕಾರಣವನ್ನು ದೂರುವುದು ?

ಸಾವಿಗೆ ಯಾವ ಕಾರಣವನ್ನು ದೂರುವುದು ?

ಕೆಲವು ನಟ, ನಟಿಯರು ಲಿಪೊಸಕ್ಷನ್ ಸರ್ಜರಿ ಮಾಡಿಸಿಕೊಂಡಾಗ ಆದ ಪ್ರಮಾದಗಳಿಂದ ಅಸುನೀಗಿದರು. ಆಗ “ಅಯ್ಯೋ ಅದು ಅಪಾಯ, ಅಂಥ ಸರ್ಜರಿಗಳು ಏನೂ ಉಪಯೋಗವಿಲ್ಲ. ಸಾವನ್ನು ತರುತ್ತವೆ. ಆ ಸರ್ಜರಿ ಆರೋಗ್ಯಕರ ಎಂದ ವೈದ್ಯರು ಸುಳ್ಳು” ಎಂದರು!

ನಟಿ ಶ್ರೀದೇವಿ ಅಸುನೀಗಿದಾಗ “ಪ್ಲಾಸ್ಟಿಕ್ ಸರ್ಜರಿ , ಅದುಇದು ಮಾಡಿಸಿಕೊಂಡಿದ್ದರಿಂದ ಸತ್ತಳು. ಅವೆಲ್ಲಾ ಮಾಡಿಸಿಕೊಂಡರೆ ಆರೋಗ್ಯಕ್ಕೇನೂ ತೊಂದರೆಯಿಲ್ಲ ಎನ್ನುತ್ತಾರೆ. ಆದರೆ ಅದೆಲ್ಲಾ ಸುಳ್ಳು “, ಎಂದರು!

ಪುನೀತ್ ರಾಜ್‍ಕುಮಾರ್ ಸತ್ತಾಗ “ಜಿಮ್ ಮಾಡಿದ್ದರಿಂದಲೇ ಹೀಗಾಯ್ತು. ಜಿಮ್ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಅದೆಲ್ಲಾ ಸುಳ್ಳು”, ಎಂದರು!

ಸರಳ ವಾಸ್ತು ಗುರೂಜಿ ಕೊಲೆಗೀಡಾದರು. ” ಎಲ್ಲರಿಗೂ ವಾಸ್ತು ಸಲಹೆ ಹೇಳುತ್ತಿದ್ದರು. ತಮಗೇ ತಮ್ಮ ವಾಸ್ತು ಗೊತ್ತಾಗಲಿಲ್ಲವಾ. ಹಾಗಾದರೆ ವಾಸ್ತುಶಾಸ್ತ್ರ, ಜ್ಯೋತಿಷ್ಯ ಎಲ್ಲವೂ ಸುಳ್ಳು” ಎಂದರು!

ಒಂದು ಸಾವು ಸಂಭವಿಸಿದರೆ ಸಾಕು, ಅದರ ಜೊತೆಗೆ ಅವರಿಗೆ ಸಂಭಂದಿಸಿದ ಕ್ಷೇತ್ರಗಳನ್ನೂ ಆ ಕ್ಷಣಕ್ಕೆ ಸಾಯಿಸಿಬಿಡುತ್ತಾರೆ. ಆ ಕ್ಷಣಕ್ಕೆ ಅಷ್ಟೇ…ಈಗ ಪ್ಲಾಸ್ಟಿಕ್ ಸರ್ಜರಿಗಳೂ, ಒಬೆಸ್ ಸರ್ಜರಿಗಳೂ ಲೆಕ್ಕವಿಲ್ಲದಷ್ಟು ಆಗುತ್ತಿವೆ. ಜಿಮ್ ಕೇಂದ್ರಗಳು ಮತ್ತೇ ಭರದಿಂದ ಕಾರ್ಯನಿರ್ವಹಿಸುತ್ತಿವೆ.

ಇನ್ನು ಕೆಲವೇ ದಿನಗಳಲ್ಲಿ ವಾಸ್ತು, ಜ್ಯೋತಿಷ್ಯ ಎಂದು ಮತ್ತೇ ಸರತಿ ಸಾಲುಗಳು ನಿಲ್ಲುತ್ತವೆ! ತಪ್ಪೇನಿಲ್ಲ…ಆದರೆ ಆ ಸಮಯದಲ್ಲಿ ಮಾತ್ರ ಆ ಕ್ಷೇತ್ರವನ್ನೇ ಹಿಗ್ಗಾಮುಗ್ಗಾ ಜಾಲಾಡಿಸಿಬಿಡುವುದು. ಆ ಕ್ಷೇತ್ರದ ಬಗ್ಗೆ ತಾತ್ಕಾಲಿಕ ವೈರಾಗ್ಯ ಬೆಳೆಸಿಕೊಳ್ಳುವುದು. ಆದರೆ ಮತ್ತೇ ಹಣದ ಆಸೆಗೆ ತಪ್ಪು ಸಲಹೆ, ತಪ್ಪು ಚಿಕಿತ್ಸೆ ನೀಡುವ ವೈದ್ಯರನ್ನು ಸಂಪರ್ಕಿಸುವುದು, ತಪ್ಪು ಮಾರ್ಗದರ್ಶನದಲ್ಲಿ ಯದ್ವಾತದ್ವಾ ವ್ಯಾಯಾಮ ಮಾಡುವುದು…ಮತ್ತೇ ಸುಳ್ಳು ಜ್ಯೋತಿಷಿಗಳನ್ನು ನಂಬುವುದು…ಮತ್ತೇ…ಮತ್ತೇ…

ಪರಿಣತ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು, ತಮ್ಮ ಶರೀರ ಪ್ರಕೃತಿಗೆ ಸೂಕ್ತ ಎಂದು ದೃಢೀಕರಣವಾದರೆ ಮಾತ್ರ ಅಂಥಾ ಸರ್ಜರಿಗಳನ್ನು ಮಾಡಿಸಿಕೊಳ್ಳುವುದು, ಸರಿಯಾದ ಮಾಹಿತಿ, ಮಾರ್ಗದರ್ಶನದಲ್ಲಿ ವ್ಯಾಯಾಮ ಮಾಡುವುದು…ಇವೆಲ್ಲಾ ಎಷ್ಟು ಸೂಕ್ತವೋ ಹಾಗೆಯೇ ಜ್ಯೋತಿಷ್ಯ, ವಾಸ್ತು ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ , ಜ್ಯೋತಿಷ್ಯ ಧರ್ಮಕ್ಕನುಗುಣವಾಗಿ ಸಲಹೆ ನೀಡುವವರನ್ನು ಸಂಪರ್ಕಿಸಿ ಸಲಹೆ ಪಡೆಯುವುದೂ ತಪ್ಪಲ್ಲ ( ಅವುಗಳಲ್ಲಿ ನಂಬಿಕೆಯಿದ್ದರೆ ಮಾತ್ರ)! ಯಾರನ್ನು ನಂಬಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ವಿವೇಚನೆ ಬೆಳೆಸಿಕೊಳ್ಳಬೇಕೇ ವಿನಃ ಆ ಕ್ಷೇತ್ರಗಳನ್ನೇ ದೂರುವುದು ತಪ್ಪು !

ಸುದ್ದಿ ಓದಿ