ಅಥಣಿ

ಶೇರು ಮೊತ್ತ ಸಾವಿರಕ್ಕೆ ಹೆಚ್ಚಿಸಿಕೊಂಡರೆ ಮಾತ್ರ ಮತದಾನದ ಹಕ್ಕು: ಶೀತಲ್ ಪಾಟೀಲ

ಶೇರು ಮೊತ್ತ ಸಾವಿರಕ್ಕೆ ಹೆಚ್ಚಿಸಿಕೊಂಡರೆ ಮಾತ್ರ ಮತದಾನದ ಹಕ್ಕು: ಶೀತಲ್ ಪಾಟೀಲ

ಅಥಣಿ 20: ಅಥಣಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು ಕಳೆದ 63 ವರ್ಷಗಳಿಂದ ರೈತರಿಗೆ ಆರ್ಥಿಕ ನೆರವು ನೀಡುತ್ತ ಬಂದಿದ್ದು, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ನಿರ್ದೇಶಕ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಗಳ ಸತತ ಪ್ರಯತ್ನ ಮತ್ತು ಸದಸ್ಯರ ಸಹಕಾರದ ಪರಿಣಾಮ ಬ್ಯಾಂಕು 2023-24 ನೇ ಸಾಲಿನಲ್ಲಿ 137.56 ಲಕ್ಷ ರೂ.ಗಳ ಲಾಭ ಗಳಿಕೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ದುಂಡಪ್ಪ ಅಸ್ಕಿ ಹೇಳಿದರು. 

ಅವರು ಬ್ಯಾಂಕಿನ 63 ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಾಲೂಕಿನ  ರೈತ ಬಾಂಧವರಿಗೆ ಸರಕಾರದ ಬಡ್ಡಿ ರಿಯಾಯಿತಿ ಯೋಜನೆಯಿಂದ ಅತೀ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸುಲಭ ಕಂತುಗಳಲ್ಲಿ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯ ನೀಡುವ ಏಕೈಕ ಸಂಸ್ಥೆ ನಮ್ಮದಾಗಿದ್ದು,  2023-24 ರ ಅಂತ್ಯದ ವರೆಗೆ ಒಟ್ಟು 14260 ‘ಆ’ ವರ್ಗದ ಸದಸ್ಯರನ್ನು ಹೊಂದಿದ್ದು, ಇದರಲ್ಲಿ 7885 ಸಾಲಗಾರ ಮತ್ತು  6375 ಬಿನ್ ಸಾಲಗಾರ ಸದಸ್ಯರಿದ್ದಾರೆ ಎಂದು ತಿಳಿಸಿದರು.  

 2023-24 ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ತಮ್ಮೆಲ್ಲರ ಸಹಾಯ ಸಹಕಾರದಿಂದ ರೂ. 475 ಲಕ್ಷ ಸಾಲವನ್ನು  ಹಂಚಿಕೆ ಮಾಡಲಾಗಿದೆ. ಈ ಪೈಕಿ  ಕೃಷಿ ಯಾಂತ್ರೀಕರಣಕ್ಕಾಗಿ 17.33 ಲಕ್ಷ,  ತೋಟಗಾರಿಕೆಗಾಗಿ 255.37,  ಭೂ-ಅಭಿವೃದ್ಧಿಗಾಗಿ  175 ಲಕ್ಷ, ವಿವಿಧೋದ್ದೇಶಗಳ ಯೋಜನೆಗಾಗಿ  27.33 ಲಕ್ಷ ರೂ.ಸಾಲ ನೀಡಲಾಗಿದೆ. 2024-25 ನೇ ಸಾಲಿಗಾಗಿ ಒಟ್ಟು 5 ಕೋಟಿ ರೂ. ಗಳ ಆರ್ಥಿಕ ಸಾಲ ಹಂಚಿಕೆ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.  

ಪ್ರಸಕ್ತ ಸಾಲಿನಲ್ಲಿ ನಮ್ಮ ಬ್ಯಾಂಕು ದಶಕದಲ್ಲಿಯೇ ಅತೀ ಹೆಚ್ಚಿನ ವಸೂಲಾತಿಯನ್ನು ಸಾಧಿಸಿದ್ದು,  ರಾಜ್ಯ ಸರ್ಕಾರವು ಅಸಲು ತುಂಬಿದರೆ ಸಂಪೂರ್ಣ ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದಿದ್ದರಿಂದ ನಮ್ಮ ಬ್ಯಾಂಕಿನ ಸುಸ್ತಿ ಸಾಲಗಾರರಿಗೆ ತುಂಬಾ ಅನುಕೂಲವಾಗಿ ಸುಮಾರು 136 ಸಾಲಗಾರರು ತಮ್ಮ ಸುಸ್ತಿ ಅಸಲು 105.54 ಲಕ್ಷ ಭರಣಾ ಮಾಡಿ  135.39 ಲಕ್ಷಸರಕಾರದ ಬಡ್ಡಿ ಮನ್ನಾ ಪ್ರಯೋಜನೆ ಪಡೆದುಕೊಂಡು ಸುಸ್ತಿ ಸಾಲದಿಂದ ಋಣ ಮುಕ್ತರಾಗಿದ್ದಾರೆ ಹಾಗೂ ಚಾಲ್ತಿ ಸಾಲಗಾರರು ಸಹ ಸರಕಾರದ ಬಡ್ಡಿ ರಿಯಾಯಿತಿ ಯೋಜನೆ ಅಡಿ ಶೇಕಡಾ 3ರ ಬಡ್ಡಿ ದರದಲ್ಲಿ ಸಾಲ ಪಡೆದ ತಮ್ಮ ಚಾಲ್ತಿ ಕಂತುಗಳನ್ನು ನಿಗದಿತ ಅವಧಿಯೊಳಗೆ ಪಾವತಿಸಿದ್ದು ಅವರಿಗೆ 49.02 ಲಕ್ಷ ಬಡ್ಡಿ ರಿಯಾಯತಿ ಪಡೆದುಕೊಂಡಿದ್ದಾರೆ. ಹೀಗಾಗಿ 2023-24 ನೇ ಸಾಲಿನಲ್ಲಿ ಒಟ್ಟು ಶೇಕಡಾ 80.25 ರಷ್ಟು ಸಾಲ ವಸೂಲಾತಿ ಸಾಧಿಸಿದೆ ಎಂದು ತಿಳಿಸಲು ಹರ್ಷ ಎನಿಸುತ್ತದೆ ಎಂದ ಅವರು ಇದೇ ರೀತಿ ಸಾಲ ವಸೂಲಾತಿ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ನಮಗೆ ತಾಲೂಕಿನ ರೈತರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲು ಅನುಕೂಲವಾಗುತ್ತದೆ ಎಂದರು. 

ಪ್ರತಿ ವರ್ಷ ತಾವು ಬ್ಯಾಂಕಿನಿಂದ ಸಾಲ ಪಡೆದು ಅಭಿವೃದ್ಧಿ ಹೊಂದಿ ಸಕಾಲದಲ್ಲಿ ಕಂತುಗಳನ್ನು ಮರುಪಾವತಿ ಮಾಡಿದಲ್ಲಿ ವರ್ಷದಿಂದ ವರ್ಷಕ್ಕೆ ಬ್ಯಾಂಕು ಅಭಿವೃದ್ಧಿ ಹೊಂದುವಲ್ಲಿ ಸಂಶಯವಿಲ್ಲ ಎಂದರು. ಅದೇ ರೀತಿ ಪ್ರಸಕ್ತಸಾಲಿನಲ್ಲಿ ಒಟ್ಟು 7 ಆಡಳಿತ ಮಂಡಳಿಯ ಸಭೆಗಳನ್ನು ಜರುಗಿಸಿ ಬ್ಯಾಂಕಿನ ದೈನಂದಿನ ಕಾರ್ಯ ನಿರ್ವಹಣೆ ಸಾಲ ಹಂಚಿಕೆ. ಸಾಲ ವಸೂಲಿ ಆಡಳಿತಾತ್ಮಕ ಖರ್ಚು ವೆಚ್ಚ ನಿರ್ವಹಣೆಗಳ ವಿಮರ್ಶೆ ಮಾಡಲಾಗಿದೆ ಎಂದ ಅವರು  2023-24 ಸಾಲಿನಲ್ಲಿ ನಮ್ಮ ಬ್ಯಾಂಕು ರೂ. 137.56 ಲಕ್ಷಗಳ ಲಾಭ ಗಳಿಕೆ ಮಾಡಿದೆ ಎಂದರು.  

ಬ್ಯಾಂಕಿನ ಹಿರಿಯ ನಿರ್ದೇಶಕ ಮಹಾದೇವ ಕೋರೆ ಮಾತನಾಡಿ, ಬ್ಯಾಂಕಿನ ಕಟ್ಟಡ ಶಿಥಿಲಗೊಂಡಿದ್ದು, ಇದರ ನವೀಕರಣಕ್ಕಾಗಿ 26 ಲಕ್ಷ ರೂ.ಗಳ ಯೋಜನೆ ಸಿದ್ಧವಾಗಿದ್ದು, ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು ಸದಸ್ಯರು ಬ್ಯಾಂಕಿನಿಂದ ಸಾಲ ಪಡೆದು ನಿಗದಿತ ಸಮಯದಲ್ಲಿ ಪಾವತಿಸಬೇಕು ಮತ್ತು ಠೇವಣಿ ಕೂಡ ಇಡಬೇಕು ಆಗ ಮಾತ್ರ ಬ್ಯಾಂಕು ಅಭಿವೃದ್ಧಿಯಾಗುವುದು ಎಂದರು. 

ಬ್ಯಾಂಕಿನ ನಿರ್ದೇಶಕ ಶೀತಲ್ ಪಾಟೀಲ ಮಾತನಾಡಿ, ಈಗಿದ್ದ ಸದಸ್ಯರು 300 ರೂ.ಹಣ ಪಾವತಿಸಿ ಶೇರುದಾರ ಸದಸ್ಯರಾಗಿದ್ದು, ಈಗ ಸರಕಾರದ ನಿಯಮಾವಳಿಗಳು ಬದಲಾಗಿದ್ದು, ಪ್ರತಿ ಶೇರುದಾರ ಸದಸ್ಯರು ಹೆಚ್ಚುವರಿಯಾಗಿ 700 ರೂ.ಪಾವತಿಸುವ ಮೂಲಕ 1000 ಸಾವಿರ ದಷ್ಟು ಶೇರು ಮೊತ್ತಕ್ಕೆ ಹೆಚ್ಚಿಸಿಕೊಳ್ಳಬೇಕು. ಶೇರು ಹಣ 1000 ಸಾವಿರ ಇರದೇ ಹೋದಲ್ಲಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.  

ಬ್ಯಾಂಕನ ವ್ಯವಸ್ಥಾಪಕ ಆರ್‌.ಎಚ್‌.ಬಂಡಿವಡ್ಡರ, ಆಡಳಿತ ಮಂಡಳಿಯ ಮತ್ತು ಶೇರುದಾರ ಸದಸ್ಯರು ಉಪಸ್ಥಿತರಿದ್ದರು. ಕ್ಷೇತ್ರಾಧಿಕಾರಿ ಸಂತೋಷ ಬನಸೋಡೆ ನಿರೂಪಿಸಿದರು, ನಿರ್ದೇಶಕ ಮಂಡಳಿ ಸದಸ್ಯ ವಿನಯ ಪಾಟೀಲ ವಂದಿಸಿದರು. 


ಸುದ್ದಿ ಓದಿ