ಮಕ್ಕಳ ದೃಷ್ಟಿ, ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ‘ಎ’ ಅತ್ಯಗತ್ಯ : ಎಂ.ಪಿ. ದೊಡಮನಿ
ವಿಜಯನಗರ(ಹೊಸಪೇಟೆ) 17: ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಕಣ್ಣಿನ ದೃಷ್ಟಿಯ ರಕ್ಷಣೆಯಲ್ಲಿ ವಿಟಮಿನ್ ‘ಎ’ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ 9 ತಿಂಗಳಿಂದ 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ವಿಟಮಿನ್ ‘ಎ’ ದ್ರಾವಣ ಹಾಕಿಸುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡಮನಿ ಪೋಷಕರಿಗೆ ಕರೆ ನೀಡಿದರು.
ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಿಟಮಿನ್ ‘ಎ’ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ವಿಟಮಿನ್ ‘ಎ’ ಕೊರತೆಯಾದರೆ ದೃಷ್ಟಿ ಮಂದವಾಗುವುದು, ಇರುಳು ಕುರುಡುತನ ಹಾಗೂ ಕಣ್ಣಿನ ಒಣಗುವಿಕೆಯಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ‘ಎ’ ಕಣ್ಣಿನ ಆರೋಗ್ಯದ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೈಹಿಕ ಬೆಳವಣಿಗೆಗೂ ಸಹಕಾರಿಯಾಗಿದೆ. ನಿಗದಿತ ಪ್ರಮಾಣದಲ್ಲಿ ನೀಡುವುದರಿಂದ ಅತಿಸಾರ, ನ್ಯುಮೋನಿಯಾ ಸೇರಿದಂತೆ ವಿವಿಧ ಸೋಂಕುಗಳ ವಿರುದ್ಧ ಮಕ್ಕಳಿಗೆ ರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅರ್ಹ ಮಕ್ಕಳಿಗೆ ನಿಗದಿತ ಕಾಲಾವಧಿಯಲ್ಲಿ ಹಂತ ಹಂತವಾಗಿ ವಿಟಮಿನ್ ‘ಎ’ ದ್ರಾವಣ ನೀಡಲಾಗುತ್ತದೆ. ಆದ್ದರಿಂದ ಪೋಷಕರು ನಿರ್ಲಕ್ಷ್ಯ ವಹಿಸದೆ ಸಮೀಪದ ಅಂಗನವಾಡಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮಕ್ಕಳಿಗೆ ವಿಟಮಿನ್ ‘ಎ’ ಹನಿಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್, ಶಶಿರೇಖಾ, ದೇವೇಂದ್ರ ತಳವಾರ, ಶ್ರೀಪತಿ ಸೇರಿದಂತೆ ಸಾರ್ವಜನಿಕರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.