ವಿಜಯನಗರ

ಸರಕಾರದ ಗ್ಯಾರಂಟಿ ಭರವಸೆಯನ್ನು ಸಾಕಾರಗೊಳಿಸಿ; ಪಡಿತರ ಅಕ್ಕಿ, ಸೌಲಭ್ಯಗಳ ದುರುಪಯೊಗ ಆಗದಂತೆ ಎಚ್ಚರಿಕೆ ವಹಿಸಿ: ಪಿ.ಟಿ. ಪರಮೇಶ್ವರ ನಾಯ್ಕ್‌

ಸರಕಾರದ ಗ್ಯಾರಂಟಿ ಭರವಸೆಯನ್ನು ಸಾಕಾರಗೊಳಿಸಿ; ಪಡಿತರ ಅಕ್ಕಿ, ಸೌಲಭ್ಯಗಳ ದುರುಪಯೊಗ ಆಗದಂತೆ ಎಚ್ಚರಿಕೆ ವಹಿಸಿ: ಪಿ.ಟಿ. ಪರಮೇಶ್ವರ ನಾಯ್ಕ್‌
Ensure the realization of the government's guarantee promises; take precautions to prevent the misus


           ವಿಜಯನಗರ (ಹೊಸಪೇಟೆ) ನ.12: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ​‍್ಕವಾಗಿ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸರಕಾರದ ಗ್ಯಾರಂಟಿ ಭರವಸೆಯನ್ನು ಸಾಕಾರಗೊಳಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಮತ್ತು ವಿಶೇಷವಾಗಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಪಡಿತರ ಅಕ್ಕಿ ದುರುಪಯೋಗವಾಗದಂತೆ ಎಚ್ಚರಿಕೆ                                    ವಹಿಸಬೇಕೆಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.  

           ಸರ್ಕಾರ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಮರ​‍್ಕವಾಗಿ ಪಡಿತರ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲಿಯೇ ಆಟೋಗಳನ್ನು ನಿಲ್ಲಿಸಿ ಪಡಿತರವನ್ನು ತೂಕ ಹಾಕಿ ಸಾಗಿಸುತ್ತಿರುವುದು ಕಂಡುಬರುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರದೃಷ್ಟಕರ ಸಂಗತಿ. ಇಂತಹ ಅಕ್ರಮಗಳನ್ನು ತಡೆಯುವಲ್ಲಿ ಅಧಿಕಾರಿಗಳು ನಿರಂತರ ಪರೀಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.  

               35 ಎಪ್‌.ಐ.ಆರ್ ದಾಖಲು, 25 ವಾಹನಗಳ ಜಪ್ತಿ: ಆಹಾರ ಇಲಾಖೆಯ ಉಪ ನಿರ್ದೇಶಕ ರಯಾಜ್ ಅವರು ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ದುರುಪಯೋಗ ತಡೆಯಲು ಸಾರ್ವಜನಿಕರ ಮಾಹಿತಿ ಆದರಿಸಿ ನಿರಂತರವಾಗಿ ರೆಡ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಗುರುತಿಸಿ 35 ಪ್ರಕರಣ ದಾಖಲಿಸಲಾಗಿದೆ. 19 ಜನರನ್ನು ಬಂಧಿಸಲಾಗಿದ್ದು, 25 ವಾಹನಗಳು ಹಾಗೂ 13,078 ಕೆ.ಜಿ. ಪಡಿತರವನ್ನು ಜಪ್ತಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.  

           ಗೃಹಲಕ್ಷ್ಮಿ ಯೋಜನೆಯ 14ನೇ ಕಂತು ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಆದರೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮುಂಗಡವಾಗಿ ಒಂದು ಕಂತಿನ ಹಣ ಪಾವತಿಸಲಾಗಿದೆ. ದೀಪಾವಳಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮೂರು ಕಂತುಗಳ ಬಾಕಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಎಂದು ತಿಳಿಸಿದರು.  

            ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ಮಹಿಳೆಯರ ವಿಶ್ರಾಂತಿ ಗೃಹ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಾಗದಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಅತ್ಯಂತ ಅಗತ್ಯ. ಆದ್ದರಿಂದ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವುದರ ಜತೆಗೆ ಕುಡಿಯುವ ನೀರು,         

         ಸ್ವಚ್ಛ ಶೌಚಾಲಯ ಹಾಗೂ ಮಹಿಳೆಯರ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಕೂಡಲೇ ಸರಿಪಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು, ಸೂಚನೆ ನೀಡಿದರು.  ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 500 ಹೊಸ ಬಸ್ಗಳನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ನೂತನ ಬಸ್ಗಳ ಪೂರೈಕೆ ಆಗಲಿದೆ ಎಂದು ತಿಳಿಸಿದರು. 


ಸುದ್ದಿ ಓದಿ