ಬರ ಪರಿಸ್ಥಿತಿ: ಹಿಂಗಾರು ಹಂಗಾಮಿನಲ್ಲಿ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಡಿಸಿ ಕರೆ
ವಿಜಯನಗರ(ಹೊಸಪೇಟೆ) ಅ.17: ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ಮಣ್ಣಿನಲ್ಲಿ ತೇವಾಂಶದ ಅಭಾವದಿಂದ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ, ರೈತರು ಹಿಂಗಾರು ಹಂಗಾಮಿನಲ್ಲಿ ಕಡಿಮೆ ನೀರು ಬಳಸಿ, ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಹಾಗೂ ಬರ ತಡೆದುಕೊಳ್ಳುವ ಸಾಮರ್ಥ್ಯವಿರುವ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ ನೀಡಿದರು. ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ವತಿಯಿಂದ ಹಿಂಗಾರು ಹಂಗಾಮಿನಲ್ಲಿ ಪರ್ಯಾಯ ಬೆಳೆಗಳ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತರು ಬೆಳೆ ಆಯ್ಕೆ ಮಾಡುವ ಮುನ್ನ ಪ್ರಸ್ತುತ ಮಳೆಯ ಪ್ರಮಾಣ, ಮುಂದಿನ ಮಳೆ ಮುನ್ಸೂಚನೆ ಹಾಗೂ ಬಿತ್ತನೆಗೆ ಉಳಿದಿರುವ ಅವಧಿಯನ್ನು ಗಮನಿಸಬೇಕು. ತೀವ್ರ ಬರ ಪರಿಸ್ಥಿತಿಯಲ್ಲಿ ಬೆಳೆ ನಷ್ಟವನ್ನು ಕಡಿಮೆ ಮಾಡಲು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕಾಪಾಡಲು ಕಡಲೆ, ಜೋಳ, ಕುಸುಬೆ, ಹುರಳಿ, ಸೂರ್ಯಕಾಂತಿ ಮತ್ತು ಅಲಸಂದಿ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ನೀರಾವರಿ ಸೌಲಭ್ಯವಿರುವ ರೈತರು ರಾಗಿ ಹಾಗೂ ಶೇಂಗಾ ಬೆಳೆಯಬಹುದು. ಬಿತ್ತನೆಗೂ ಮುನ್ನ ಬೀಜ ಮೊಳಕೆಯೊಡೆಯಲು ಮತ್ತು ಸಸಿಗಳ ಬೆಳವಣಿಗೆಗೆ ಅಗತ್ಯವಾದ ತೇವಾಂಶ ಮಣ್ಣಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬೀಜೋಪಚಾರ, ತೇವಾಂಶ ಸಂರಕ್ಷಣೆ, ನೀರಿನ ಉಳಿತಾಯ ಹಾಗೂ ಮೇವು ನಿರ್ವಹಣಾ ಪದ್ಧತಿಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.