ಕೋವಿಡ್ ನಿಯಂತ್ರಣಕ್ಕಾಗಿ ನಿರಾಣಿ ಫೌಂಡೇಶನ್ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮ: ನಿರಾಣಿ
ಇಂಡಿ 02: ಇಡೀ ಮಾನವ ಕುಲವನ್ನೇ ತಲ್ಲಣಗೊಳಿಸಿದ ಕೋವಿಡ್-19 ನಿಯಂತ್ರಣಕ್ಕಾಗಿ ನಿರಾಣಿ ಫೌಂಡೇಶನ್ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ, ನಿರಾಣಿ ಫೌಂಡೇಶನ್ ನಿರ್ದೇಶಕ ಹಣಮಂತ ನಿರಾಣಿ ತಿಳಿದರು.
ಸೋಮವಾರ ಪಟ್ಟಣದ ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ಸೇವಾಭಾರತಿ ಟ್ರಸ್ಟ್ (ರಿ) ಹಾಗೂ ಎಂ.ಆರ್.ಎನ್ (ನಿರಾಣಿ) ಫೌಂಡೇಶನ್ ಸಹಯೋಗದಲ್ಲಿ ಕೊರೊನಾ ಮುಕ್ತವಾಗಿಸಲು ಇಂಡಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ 35 ಕ್ಯಾನ್ ಸೋಡಿಯಂ ಹೈಪೊ ಕ್ಲೋರೈಡನ್ನು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮದ್ದಿನ್ ಅವರಿಗೆ ವಿತರಿಸಿ ಮಾತನಾಡಿದರು.
ಈಗಾಗಲೆ ನಿರಾಣಿ ಫೌಂಡೇಶನ್ ವತಿಯಿಂದ ಬಾಗಲಕೋಟ ಜಿಲ್ಲೆಯಲ್ಲಿ 5 ಅಂಬುಲೆನ್ಸ ಹಾಗೂ 4 ಇತರೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕಿತರು ಮೃತರಾದಾಗ ಶವ ಸಾಗಾಟ ಮಾಡಲು ಖಾಸಗಿ ವಾಹನಗಳ ಮಾಲೀಕರು ಹತ್ತಾರು ಸಾವಿರ ರೂಪಾಯಿ ಪಡೆಯುತ್ತಿರುವುದನ್ನು ಗಮನಿಸಿ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 4 ವಾಹನಗಳನ್ನು ಶವ ಸಾಗಾಟಕ್ಕೆ ನೀಡಿದ್ದೇವೆ ಎಂದು ತಿಳಿಸಿದರು.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರತೀ ಗ್ರಾಮಗಳಿಗೂ ಈ ಸೋಡಿಯಂ ಹೈಪೊ ಕ್ಲೋರೈಡನ್ನು ವಿತರಿಸಲಾಗಿದೆ. ಇದನ್ನು ಸಿಂಪಡಣೆ ಮಾಡುವುದರಿಂದ ಗ್ರಾಮೀಣ ಭಾಗದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಎಂದರು.
ಕೇವಲ ಸರಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂಘ ಸಂಸ್ಥೆಗಳು ಇಂತಹ ಕಾರ್ಯ ಮಾಡಲು ಮುಂದೆ ಬರಬೇಕು. ಮುರಗೇಶ್ ನಿರಾಣಿ ಅವರು ಬಡ ಕುಟುಂಬದಲ್ಲಿ ಜನಿಸಿ, ಬಡವರ ಕಷ್ಟದ ಬಗ್ಗೆ ಅರಿತುಕೊಂಡವರಾಗಿದ್ದಾರೆ. ಹೀಗಾಗಿ ಪ್ರತೀ ಬಾರಿಯೂ ಏನೆ ತೊಂದರೆ ಇದ್ದರೂ ಜನರ ಸೇವೆ ಮಾಡಲು ಮುಂದೆ ಬರುತ್ತಾರೆ. ಇಂದು ಈ ಕೊರೋನಾ ಮಹಾಮಾರಿ ತಡೆಗಟ್ಟಲು ಸಹ ಸಾಕಷ್ಟು ಸೇವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಿರಾಣಿ ಫೌಂಡೇಶನ್ ವತಿಯಿಂದ ಇಂಡಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ಗಳಿಗೆ, ಪುರಸಭೆಗಳಿಗೆ ವಿತರಿಸಲು 35 ಕ್ಯಾನ್ ಸೋಡಿಯಂ ಹೈಪೊ ಕ್ಲೋರೈಡನ್ನು ನೀಡಿದ್ದು ಶ್ಲಾಘನೀಯ. ನಿರಾಣಿ ಫೌಂಡೇಶನ್ ವತಿಯಿಂದ ಅಂಬುಲೆನ್ಸ ಸೇರಿ ವೈದ್ಯಕೀಯ ಸೇವೆ ಸಹ ನೀಡುತ್ತಿರುವುದು ಸಂತಸದ ಸಂಗತಿ. ನಿರಾಣಿ ಪರಿವಾರದ ಈ ಕಾರ್ಯ ಶ್ಲಾಘನೀಯ.
ಕಾಸುಗೌಡ ಬಿರಾದಾರ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಮುಖಂಡರಾದ ರವಿಕಾಂತ ಬಗಲಿ, ಶ್ರೀಶೈಲಗೌಡ ಬಿರಾದಾರ, ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಸುರೇಶ ಬಿರಾದಾರ, ಬುದ್ದುಗೌಡ ಪಾಟೀಲ, ಅನೀಲಗೌಡ ಬಿರಾದಾರ, ಶೀಲವಂತ ಉಮರಾಣಿ, ತಹಸೀಲ್ದಾರ ಚಿದಂಬರ ಕುಲಕರ್ಣಿ, ಇಓ ಸುನಿಲ್ ಮದ್ದಿನ್, ಶಿವಯೋಗಿ ರೂಗಿಮಠ, ರಾಮಸಿಂಗ ಕನ್ನೊಳ್ಳಿ, ಸುನಂದಾ ಮದರಿ ಸೇರಿದಂತೆ ಮತ್ತಿತರರು ಇದ್ದರು.