ಅಥಣಿ ಪುರಸಭೆಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಅಥಣಿ 02: ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಥಣಿ ಪುರಸಭೆಗೆ ಅಧ್ಯಕ್ಷ ಗಾದಿಗೆ ಶಿವಲಿಲಾ ಸದಾಶಿವ ಬುಟಾಳಿ, ಉಪಾಧ್ಯಕ್ಷರಾಗಿ ಭುವನೇಶ್ವರಿ ಬೀರ್ಪ ಯಕ್ಕಂಚಿ ಅವಿರೋಧವಾಗಿ ಆಯ್ಕೆಯಾದರು. ಶಾಸಕ ಲಕ್ಷ್ಮಣ ಲಕ್ಷ್ಮಣ ಸವದಿ ಕಳೆದ ಎರಡು ದಿನಗಳಿಂದ ಕಾರ್ಯತಂತ್ರ ರೂಪಿಸಿದ ಪರಿಣಾಮ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಪಕ್ಷದ ಎಲ್ಲ 15 ಸದಸ್ಯರು ಶಾಸಕ ಲಕ್ಷ್ಮಣ ಸವದಿಯವರ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು ಜೊತೆಗೆ ಬಿಜೆಪಿಯಿಂದ ಚುನಾಯಿತರಾಗಿ ಶಾಸಕ ಲಕ್ಷ್ಮಣ ಸವದಿಯವರನ್ನು ಬೆಂಬಲಿಸಿದ 9 ಜನ ಸದಸ್ಯರು ಮತ್ತು 3 ಜನ ಪಕ್ಷೇತರ ಸದಸ್ಯರು ಕೂಡ ಸವದಿಯವರ ಬೆಂಬಲಕ್ಕೆ ನಿಂತ ಪರಿಣಾಮ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸುರಳಿತವಾಗಿ ನಡೆಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಪುರಸಭೆಯ 27 ಸದಸ್ಯರು ಅಥಣಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ವಾನುಮತದಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಸಹಕರಿಸಿದ್ದು, ಪುರಸಭೆಯ ಎಲ್ಲ ಸದಸ್ಯರನ್ನು ಅಭಿನಂದಿಸಿದರು.
ನಾನು ಶಾಸಕನಾಗಿ ಆಯ್ಕೆಯಾದ ನಂತರ ಅಥಣಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸಿ ಎಂದು ಮೊದಲ ಹಂತದ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಅನೇಕ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈ ಪೈಕಿ ಜೋಡು ಕೆರೆ ಅಭಿವೃದ್ಧಿಗಾಗಿ ಈಗಾಗಲೇ 15 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕೆಲವೇ ಕೆಲವು ತಿಂಗಳಲ್ಲಿಯೇ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಅಥಣಿ ಪಟ್ಟಣಕ್ಕೆ 24*7 ಕುಡಿಯುವ ನೀರು ಒದಗಿಸುವ 118 ಕೋಟಿ ಯೋಜನೆಯ ಕಾಮಗಾರಿಗೆ ಚಾಲನೆ ದೊರಕಿದ್ದು, ಕಾಮಗಾರಿಯೂ ಕೂಡ ಪ್ರಾರಂಭಗೊಂಡಿದೆ ಜೊತೆಗೆ ಒಳ ಚರಂಡಿ ಯೋಜನೆ ಸಂಬಂಧ ಅಗತ್ಯ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದ ಅವರು ಪಟ್ಟಣ ವ್ಯಾಪ್ತಿಯ ಭಾಗೀರಥಿ ನಾಲಾ ಅಭಿವೃದ್ಧಿ ಯೋಜನೆಗೂ ಅನುದಾನ ಮಂಜೂರಾಗಿದ್ದು, ಕಾಮಗಾರಿ ಇಷ್ಟರಲ್ಲಿಯೇ ಪ್ರಾರಂಂಭಗೊಂಡಿದೆ ಎಂದರು.
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆಯ ಎಲ್ಲ ಸದಸ್ಯರು ಅವಿರೋಧ ಆಯ್ಕೆ ಪ್ರಕ್ರಿಯೆ ಬೆಯೋಜನೆಯ ರುವ ಎಲ್ಲ 27 ಸದಸ್ಯರನ್ನು ಅಭಿನಂದಿಸುವೆ ಎಂದ ಅವರು ಅಥಣಿ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದರು.
ನೂತನ ಅಧ್ಯಕ್ಷೆ ಶಿವಲೀಲಾ ಬುಟಾಳಿ ಮಾತನಾಡಿ, ಪಟ್ಟಣದ ಅಭಿವೃದ್ಧಿ ಗಾಗಿ ನನ್ನ ಅಧಿಕಾರವಧಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಪ್ರಯತ್ನಿಸುವೆ ಎಂದರು. ನೂತನ ಉಪಾಧ್ಯಕ್ಷೆ ಭುವನೇಶ್ವರಿ ಯಂಕಂಚಿ ಮಾತನಾಡಿದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಶಿದರಾಯ ಭೋಸಗೆ ಕಾರ್ಯನಿರ್ವಹಿಸಿದರು. ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮತ್ತು ಪುರಸಭೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಧುರೀಣರಾದ ಎಸ್.ಕೆ.ಬುಟಾಳಿ, ನರಸು ಬಡಕಂಬಿ, ಅರುಣ ಬಾಸಿಂಗಿ, ರಾಮನಗೌಡ ಪಾಟೀಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.